ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜಕಾರಣಿಗಳು ಜಿಂದಾಲ್ ಉಕ್ಕು ಕಾರ್ಖಾನೆ ಅತಿಥಿಗೃಹದಲ್ಲಿ ತಂಗಿ, ಅವರ ಆತಿಥ್ಯ ಸ್ವೀಕರಿಸುತ್ತಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮ ಗೌಡ ಆರೋಪಿಸಿದ್ದಾರೆ.
ಜಿಂದಾಲ್ ಉಕ್ಕು ಕಾರ್ಖಾನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅಧ್ಯಕ್ಷ ಜಿ. ಪುರುಷೋತ್ತಮ ಗೌಡ, ಜಿಂದಾಲ್ ಉಕ್ಕು ಕಾರ್ಖಾನೆಗೆ ಸಾವಿರಾರು ಎಕರೆ ಭೂಮಿ ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಜಿಂದಾಲ್ ಸಮೂಹ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ. ಎಲ್ಲ ಪಕ್ಷದ ರಾಜಕಾರಣಿಗಳು ಜಿಂದಾಲ್ ಸೂಟ್ ಕೇಸ್ ಪಡೆಯುವ ದುರುದ್ದೇಶವನ್ನಿಟ್ಟುಕೊಂಡೇ ಅಲ್ಲಿಗೆ ಹೋಗುತ್ತಿದ್ದಾರೆ. ಜಿಂದಾಲ್ ಸಮೂಹ ಸಂಸ್ಥೆಯು ಹೆಣ್ಣು, ಹೊನ್ನು ಹಾಗೂ ಮಣ್ಣಿನ ಆಮಿಷವನ್ನು ರಾಜಕಾರಣಿಗಳಿಗೆ ಒಡ್ಡುತ್ತಿದ್ದಾರೆ. ಹೀಗಾಗಿ, ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಟೆಕ್ನಿಕಲ್ ಆಲ್ಟ್ನ ನೆಪವೊಡ್ಡಿ ಜಿಂದಾಲ್ನಲ್ಲಿ ತಂಗುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಕಾರಣಿಗಳಿಗೆ ಜಿಂದಾಲ್ ಜೇನು ತುಪ್ಪವಿದ್ದಂತೆ:
ಜಿಂದಾಲ್ ಉಕ್ಕು ಕಾರ್ಖಾನೆ ರಾಜಕಾರಣಿಗಳಿಗೆ ಜೇನುತುಪ್ಪ ಇದ್ದಂತೆ. ಜೇನುತಟ್ಟೆ ಇರುವ ಸ್ಥಳದಲ್ಲೇ ಹೋಗಿ ಜೇನು ಹುಳಗಳು ಹೇಗೆ ಮಕರಂಧವನ್ನು ಹೀರುತ್ತವೆಯೋ ಅದರಂತೆಯೇ ರಾಜಕಾರಣಿಗಳು ಜಿಂದಾಲ್ ಉಕ್ಕು ಕಾರ್ಖಾನೆ ಅತಿಥಿಗೃಹದಲ್ಲಿ ತಂಗಿ, ಅವರ ಆತಿಥ್ಯ ಸ್ವೀಕರಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಬ್ರಿಟಿಷರ ಕಾಲದ ವಿಮಾನ ನಿಲ್ದಾಣವಿದೆ. ಇಲ್ಲಿ ಬಂದಿಳಿಯೋದು ಬಿಟ್ಟು ನೇರವಾಗಿ ಜಿಂದಾಲ್ ವಿಮಾನ ನಿಲ್ದಾಣ ಹೋಗುವ ಎಲ್ಲ ರಾಜಕಾರಣಿಗಳನ್ನು ಹೇ ಅವಿವೇಕಿಗಳೇ ಎಂದು ಗೌಡರು ಛೇಡಿಸಿದ್ದಾರೆ.
ಹೂಳೆತ್ತಲು ಸಿಎಸ್ ಆರ್ ಫಂಡ್ ನೀಡಿ:
ಜಿಂದಾಲ್ ಉಕ್ಕು ಕಾರ್ಖಾನೆಗೆ ತುಂಗಭದ್ರಾ ಜಲಾಶಯದಿಂದ ಡಿಸೆಂಬರ್ ಕೊನೆಯವರೆಗೂ ಮಾತ್ರ ನೀರು ಹರಿ ಬಿಡಬೇಕಿತ್ತು. ಆದರೆ, ಇನ್ನೂ ನೀರನ್ನು ಹರಿಬಿಡಲಾಗುತ್ತದೆ ಎಂದು ದೂರಿದರು. ಜಿಂದಾಲ್ ಸಮೂಹ ಸಂಸ್ಥೆಯ ಸಿಎಸ್ ಆರ್ ಫಂಡ್ ಅಡಿ ತುಂಗಭದ್ರಾ ಜಲಾಶಯದ ಹೂಳೆತ್ತಲು ಅಗತ್ಯ ಅನುದಾನ ವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.