ಬಳ್ಳಾರಿ : ಗಣಿ ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಕಂಪನಿಯ ನೌಕರರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈತ 13 ವರ್ಷಗಳಿಂದಲೂ ಜಿಂದಾಲ್ ಕಂಪನಿಯಲ್ಲಿ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಮೊನ್ನೆರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದಾನೆ. ನಿನ್ನೆ ಬೆಳಗಿನ ಜಾವದವರೆಗೂ ಕೆಲಸ ಮಾಡಿದ ಈತ ನಂತರ ಎಲ್ಲಿಗೆ ಹೋಗಿದ್ದಾನೆಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.
ಆತಂಕಗೊಂಡ ದುರ್ಗಣ್ಣ ಕುಟುಂಬಸ್ಥರು ಜಿಂದಾಲ್ ಕಂಪನಿಗೆ ದೌಡಾಯಿಸಿದ್ದಾರೆ. ಆದ್ರೆ ಕಂಪನಿಯ ಆಡಳಿತ ಮಂಡಳಿಯವರು ಒಳಗಡೆ ಬಿಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಆತನನ್ನು ಅಪಹರಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ತೋರಣಗಲ್ಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಷ್ಟಾದರೂ ಜಿಂದಾಲ್ ಕಂಪನಿಯವರು ನಿರ್ಲಕ್ಷ್ಯ ತೋರಿದ ಪರಿಣಾಮ ಕುಟುಂಬಸ್ಥರು ಹಾಗೂ ಸಂಬಂಧಿಕರು ಇವತ್ತು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಕಂಪನಿಗೆ ತೆರಳುವ ಬಸ್ ಗಳನ್ನ ತಡೆದು ಪ್ರತಿಭಟನೆ ನಡೆಸಿದರು. ಸುಮಾರು 15ಕ್ಕೂ ಹೆಚ್ಚು ಬಸ್ಗಳನ್ನ ತಡೆದುದರಿಂದ ನೂರಾರು ಉದ್ಯೋಗಿಗಳು ಕಂಪನಿಯ ಕೆಲಸಕ್ಕೆ ತೆರಳದೆ ಅಲ್ಲಿಯೇ ಇರಬೇಕಾಯ್ತು. ಮಾಹಿತಿ ತಿಳಿದ ಆರೋಗ್ಯ ಸಚಿವ ಶ್ರೀರಾಮುಲು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ದುರ್ಗಣ್ಣ ಅವರ ನಿಗೂಢ ನಾಪತ್ತೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.