ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಭೇಟಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಕುಟುಂಬರಸ್ಥರಲ್ಲಿ ಉತ್ಸಾಹ ಮೂಡಿಸಿದೆ. ಎರಡು ವರ್ಷದ ವನವಾಸ ಮುಗಿಸಿಕೊಂಡು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿದ್ದಾರೆ.
ಕಳೆದ ಒಂದು ದಶಕದಿಂದ ಅಕ್ರಮ ಗಣಿಗಾರಿಕೆ ಆರೋಪವನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಎದುರಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರಿಗೆ ಈ ಹಿಂದೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿರಲಿಲ್ಲ.
ಬಳಿಕ 2016 ನವೆಂಬರ್ನಲ್ಲಿ ವಿವಾಹ ಕಾರ್ಯಕ್ರಮ ಹಿನ್ನೆಲೆ ಕೆಲ ವಾರಗಳ ಕಾಲ ಬಳ್ಳಾರಿಗೆ ತೆರಳಲು ಮಾತ್ರ ಅನುಮತಿ ನೀಡಲಾಗಿತ್ತು. ಇದಾದ ಬಳಿಕ ಜನಾರ್ದನ ರೆಡ್ಡಿ ಅವರ ಮಾವನಿಗೆ ಅನಾರೋಗ್ಯ ಉಂಟಾದ ಹಿನ್ನೆಲೆ 2019ರಲ್ಲಿ ಜೂನ್ 8ರಿಂದ ಅನುಮತಿ ಕೊಡಲಾಗಿತ್ತು. ಇದಾದ ಬಳಿಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಿಲ್ಲ.
ಈಗ ಪುನಃ ಬಳ್ಳಾರಿ ಹಾಗೂ ಅನಂತಪುರಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದು ಬಳ್ಳಾರಿಯಲ್ಲಿ ರೆಡ್ಡಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅಕ್ರಮ ಗಣಿಗಾರಿಕೆ ಆರೋಪದಡಿ 2011 ಸೆ.05 ರಂದು ಮಾಜಿ ಸಚಿವ ಜರ್ನಾದನ ರೆಡ್ಡಿಯನ್ನು ಸಿಬಿಐ ಬಂಧಿಸಿತ್ತು. ಇದಾದ ಬಳಿಕ ಕೆಲ ವರ್ಷಗಳ ಕಾಲ ಜೈಲಿನಲ್ಲಿದ್ದು, ಜಾಮೀನು ಮೇಲೆ ಹೊರಬಂದರು.
ನಂತರ ಬಳ್ಳಾರಿಗೆ ಬರಲು ಅನೇಕ ಬಾರಿ ಪ್ರಯತ್ನಿಸಿದರೂ, ಸಾಕ್ಷ್ಯ ನಾಶ ಸಂಬಂದಪಟ್ಟಂತೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರಲಿಲ್ಲ. ಬಳಿಕ ದಿನಕಳೆದಂತೆ ಅನೇಕ ಷರತ್ತುಗಳೊಂದಿಗೆ ಕೆಲವೇ ಕೆಲ ದಿನಗಳಿಗೆ ಮಾತ್ರ ಬಳ್ಳಾರಿಗೆ ತೆರಳಲು ರೆಡ್ಡಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಎಂಟು ವಾರಗಳ ಕಾಲ ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿ ಹಾಗೂ ಅನಂತಪುರಕ್ಕೆ ತೆರಳಲು ಅನುಮತಿ ನೀಡಲಾಗಿದೆ.
ಜನಾರ್ದನ ರೆಡ್ಡಿಗೆ ಎರಡು ತಿಂಗಳು ಕಾಲಾವಕಾಶ ಸಿಕ್ಕಿದೆ. ರೆಡ್ಡಿ ಬಳ್ಳಾರಿಯಿಂದ ದೂರವಾಗಿದ್ದರಿಂದ ರಾಮುಲು ಹಾಗೂ ರೆಡ್ಡಿ ಕುಟುಂಬದ ವರ್ಚಸ್ಸು ಕುಂದುವಂತೆ ಮಾಡಿತ್ತು. ಇತ್ತೀಚಿಗೆ ಜಿಲ್ಲಾ ವಿಭಜನೆ ಬಳಿಕ ಸಹ ರೆಡ್ಡಿ ಮಾತು ಮುನ್ನೆಲೆಗೆ ಬರಲಿಲ್ಲ.
ಇದು ರೆಡ್ಡಿ ಪಾಳಯದಲ್ಲಿ ಕಸಿವಿಸಿ ಉಂಟುಮಾಡಿತ್ತು. ಅಲ್ಲದೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಪುತ್ರನ ಸೋಲು, ಶ್ರೀರಾಮುಲು ಅವರಿಗೆ ಡಿಸಿಎಂ, ಬಳ್ಳಾರಿ ಜಿಲ್ಲಾ ಉಸ್ತುವಾರಿ ದಕ್ಕದಿರುವುದು ರಾಜಕೀಯವಾಗಿ ಹಿಡಿತ ಸ್ಥಾಪಿಸುವಲ್ಲಿ ವಿಫಲತೆ ಕಂಡಿದ್ದರು.
ಆದರೆ, ಈಗ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಸುಮಾರು ಎರಡು ತಿಂಗಳ ಕಾಲ ಇರುವುದು ರೆಡ್ಡಿ ಬ್ರದರ್ಸ್ ಗಳಿಗೆ ಒಂದೆಡೇ ಇನ್ನಷ್ಟು ಬಲ ಬಂದಂತಾಗಿದೆ. ಅಲ್ಲದೇ, ಜಿಲ್ಲೆ ವಿಭಜನೆ ಬಳಿಕ ಮೊದಲನೆ ಬಾರಿ ಭೇಟಿ ನೀಡುತ್ತಿರುವ ರೆಡ್ಡಿ ಅವರಿಂದ ಸ್ಥಳೀಯ ರಾಜಕಾರಣದಲ್ಲಿ ಸಹ ನಾನಾ ಬದಲಾವಣೆಗಳಿಗೂ ಕಾರಣವಾದರೂ ಆಶ್ಚರ್ಯವಿಲ್ಲ.