ಬಳ್ಳಾರಿ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಜನಾರ್ದನ ರೆಡ್ಡಿ ಬೆಂಬಲಿಗರಾದ ದಮ್ಮೂರು ಶೇಖರ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಲವು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ಕಟ್ಟುವಲ್ಲಿ ನನ್ನ ಅಳಿಲು ಸೇವೆ ಸಲ್ಲಿಸಿದ್ದೇನೆ. ಇಷ್ಟು ವರ್ಷ ಬಿಜೆಪಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿ ನೋಡಿ ನಾನು ತುಂಬಾ ವಿಚಲಿತನಾಗಿದ್ದೇನೆ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುವಲ್ಲಿ ಹಾಗೂ ದಶಕಗಳಿಂದ ಹೋರಾಟ ನಡೆಸಿದ ಯಡಿಯೂರಪ್ಪರವರನ್ನು ಮುಖ್ಯಮಂತ್ರಿಯನ್ನಾಗಿಸಿದ ಕೀರ್ತಿ ಜನಾರ್ದನ ರೆಡ್ಡಿ ಅವರಿಗೆ ಸಲ್ಲುತ್ತದೆ. ರೆಡ್ಡಿ ಅವರು ಪಕ್ಷಕ್ಕಾಗಿ ತಮ್ಮನ್ನು ತೊಡಗಿಸಿಕೊಂಡು, ಅದರಿಂದಾಗಿಯೇ ರೆಡ್ಡಿಯವರು ಹಾಗೂ ಅವರ ಕುಟುಂಬ ಸಾಕಷ್ಟು ಕಷ್ಟಗಳನ್ನು ಅನುಭವಿಸಿರುವ ರೀತಿಯಿಂದ ತುಂಬಾ ಮನ ನೊಂದಿದ್ದೇನೆ. ಜನಾರ್ದನ ರೆಡ್ಡಿಯವರು ನನ್ನಂತಹ ಸಹಸ್ರಾರು ಕಾರ್ಯಕರ್ತರನ್ನು ಬೆಳೆಸಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣೀಭೂತರಾಗಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಕುರುಬ ಸಮಾಜಕ್ಕಾಗಿ ಹೋರಾಡಿ ನನ್ನನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷನನ್ನಾಗಿಸಿ ಸೇವೆ ಕೈಗೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದ ಜನಾರ್ದನರೆಡ್ಡಿ ಅವರನ್ನು ಈ ಸಮಯದಲ್ಲಿ ಕೃತಜ್ಞತಾ ಭಾವದಿಂದ ಸ್ಮರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ತುಂಬಾ ಬೇಸರಗೊಂಡು ಹಾಗೂ ಈ ಕುರಿತು ಪಕ್ಷದ ಮೇಲಿಟ್ಟಿದ್ದ ವಿಶ್ವಾಸ ಕಳೆದುಕೊಂಡಿದ್ದೇನೆ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?