ಬಳ್ಳಾರಿ: ನೆರೆಯ ಆಂಧ್ರ ಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚಾಗಿ ಕಂಡು ಬರುತ್ತಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಗಡಿಗ್ರಾಮಗಳ ಅಕ್ರಮ ಮಾರಾಟಗಾರ ಮನೆಗಳಲ್ಲಿ ಮದ್ಯದ ಬಾಟಲ್ಗಳ ಸಂಗ್ರಹಣೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಗಡಿ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ಕೂಡ ಅಕ್ರಮ ಮದ್ಯದ ಬಾಟಲ್ಗಳ ಸಂಗ್ರಹಣೆಯಲ್ಲಿ ಗಡಿ ಭಾಗದ ನಾನಾ ಗ್ರಾಮಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ನೆರೆಯ ಆಂಧ್ರ ಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಮದ್ಯದ ಶಾಪ್ಗಳನ್ನು ಸಂಪೂರ್ಣವಾಗಿ ಮುಚ್ಚಿಸುವಂತೆ ಅಬಕಾರಿ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಿತ್ತಾದ್ರೂ ಗಡಿ ಗ್ರಾಮಗಳಲ್ಲಿ ಮಾತ್ರ ಈ ಅಕ್ರಮ ಮದ್ಯ ಮಾರಾಟ ತಲೆ ಎತ್ತಿದೆ.
ನೆರೆಯ ಆಂಧ್ರ ಪ್ರದೇಶ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗಡಿ ಭಾಗದ ನಾನಾ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯದ ಬಾಟಲ್ಗಳನ್ನು ಸಂಗ್ರಹಿಸಿಟ್ಟಿರುವ ಮಾಹಿತಿ ಪಡೆದು ದಾಳಿ ನಡೆಸಿದಾಗ ಬಹಳಷ್ಟು ಮದ್ಯದ ಬಾಟಲ್ಗಳನ್ನು ಜಪ್ತಿಗೊಳಿಸಿರೋದು ಬೆಳಕಿಗೆ ಬಂದಿದೆ.
ಗಡಿ ಗ್ರಾಮಗಳಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ರೂ ಕೂಡ ಸಾರ್ವಜನಿಕರು ಮಾತ್ರ ಅಕ್ರಮ ಮದ್ಯವನ್ನು ಖರೀದಿಸೋದನ್ನು ಕೈಬಿಟ್ಟಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಗಡಿ ಗ್ರಾಮಗಳಲ್ಲಿನ ಅಕ್ರಮ ಮದ್ಯ ಮಾರಾಟದ ಮೇಲೆ ಹದ್ದಿನ ಕಣ್ಣು ಇರಿಸಬೇಕಿದೆ.