ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಗೋನಾಳು ಗ್ರಾಮದ ಹೊರವಲಯದ ಹೊಲದಲ್ಲಿನ ಜಾಲಿ ಗಿಡದ ಪೊದೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 26 ಕ್ವಿಂಟಾಲ್ ನಷ್ಟು ಪಡಿತರ ಅಕ್ಕಿಯನ್ನ ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರೈತ ಕೆ.ಸಿ.ಶಿವಕುಮಾರ ಎಂಬುವವರ ಹೊಲದಲ್ಲಿ ಈ ಪಡಿತರ ಅಕ್ಕಿ ಮೂಟೆಗಳನ್ನ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಆಹಾರ ಇಲಾಖೆಯ ಶಿರಸ್ತೇದಾರ್ ಹೆಚ್.ನಾಗರಾಜ, ಗಾದಿಗನೂರು ಗ್ರಾಮ ಲೆಕ್ಕಾಧಿಕಾರಿ ಗಂಗಾಧರ, ಎಎಸ್ಐ ದೇವರಾಜ, ಪೊಲೀಸ್ ಪೇದೆ ಶಿವರಾಜ ನೇತೃತ್ವದ ತಂಡವು ನಿನ್ನೆ ದಿಢೀರ್ ದಾಳಿ ನಡೆಸಿ ಪಡಿತರ ಅಕ್ಕಿಯ ಮೂಟೆಗಳನ್ನ ವಶಪಡಿಸಿಕೊಂಡಿದೆ.
ಇಷ್ಟೊಂದು ಪ್ರಮಾಣದ ಪಡಿತರ ಅಕ್ಕಿಯ ಮೂಟೆ ಸಂಗ್ರಹಿಸಿಟ್ಟಿರುವ ಉದ್ದೇಶ ಹಾಗೂ ಎಲ್ಲಿಗೆ ಈ ಅಕ್ಕಿ ಮೂಟೆಗಳನ್ನ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಯಿಂದಲೇ ತಿಳಿಯಬೇಕಿದೆ. ಈ ಸಂಬಂಧ ರೈತ ಕೆ.ಸಿ.ಶಿವಕುಮಾರ ವಿರುದ್ಧ ಹೊಸಪೇಟೆ ತಾಲೂಕಿನ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.