ಹೊಸಪೇಟೆ (ಬಳ್ಳಾರಿ) : ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಲು ತೆರಳಿದಾಗ ಕೇವಲ 20 ನಿಮಿಷಗಳ ಕಾಲ ಪಿಪಿಇ ಕಿಟ್ ಧರಿಸಿದ ನನಗೆ ತಡೆಯಲಾಗಲಿಲ್ಲ. ಆದರೆ ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಮಾಡುವ ವೈದ್ಯರ, ವೈದ್ಯಕೀಯ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟರು.
![ಸಚಿವ ಆನಂದ್ ಸಿಂಗ್ ಸಭೆ](https://etvbharatimages.akamaized.net/etvbharat/prod-images/kn-04-bly-190720-ministry-anandasing-news-ka10007_19072020190619_1907f_1595165779_730.jpg)
ನಗರದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ಸರ್ಕಾರದ ಸುತ್ತೋಲೆಯ ಅನ್ವಯ ಕೊರೊನಾ ಸೋಂಕಿತರಿಗೆ ಬೆಡ್ ಒದಗಿಸುವ ಕುರಿತಂತೆ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಹೋಟೆಲ್ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್, ನಗರದ ಸಾರ್ವಜನಿಕರು ರಾಜ್ಯ ಸರರ್ಕಾರದ ಆದೇಶದಂತೆ ರಾತ್ರಿ 8 ಗಂಟೆಯ ನಂತರ ಹೊರಗಡೆ ಓಡಾಡದೇ ನಿಯಮವನ್ನು ಪಾಲಿಸುತ್ತಾ ಜಿಲ್ಲೆಯಲ್ಲೇ ಗಮನ ಸೆಳೆದಿದ್ದಾರೆ. ಕೋವಿಡ್ ಸಮಯದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಮಾದರಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1 ಸಾವಿರದಷ್ಟು ಸಕ್ರಿಯ ಪ್ರಕರಣಗಳಿದ್ದು, ಎಲ್ಲ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಾಖಲಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಇನ್ನೂ ಕೆಲದಿನಗಳ ಕಾಲ ಬೆಡ್ ಕೊರತೆ ಇಲ್ಲ ಎಂದು ಹೇಳಿದರು.
ಕೆಲದಿನಗಳ ಒಳಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಇದಕ್ಕೆ ತಾಲೂಕಿನ ಖಾಸಗಿ ವೈದ್ಯರ ಮತ್ತು ಹೋಟೆಲ್ ಮಾಲಿಕರ ಸಹಕಾರ ಅಗತ್ಯವಿದೆ. ಆರೋಗ್ಯ ಸೇವೆಗೈಯುವ ಸದಾವಕಾಶ ತಮಗೆ ಒದಗಿದ್ದು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದೊಂದಿಗೆ ಒಟ್ಟಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೊರಾಡಬೇಕಾಗಿದೆ ಎಂದರು.
![ಖಾಸಗಿ ಆಸ್ಪತ್ರೆಯ ವೈದ್ಯರು, ಹೋಟೆಲ್ ಮಾಲೀಕರ ಸಭೆ](https://etvbharatimages.akamaized.net/etvbharat/prod-images/kn-04-bly-190720-ministry-anandasing-news-ka10007_19072020190619_1907f_1595165779_120.jpg)
ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಯಾವುದೇ ಅವ್ಯವಸ್ಥೆ ಇಲ್ಲ. ಸ್ವತಃ ನಾನೇ ಪಿಪಿಇ ಕಿಟ್ ಧರಿಸಿ ಪರಿಶೀಲಿಸಿ ಬಂದಿದ್ದು ಸೋಂಕಿತರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಕೆಲವು ಕಡೆ ಸಣ್ಣಪುಟ್ಪ ತೊಂದರೆಗಳಾಗಿದ್ದರೂ ಅವುಗಳ ಕುರಿತು ಜಿಲ್ಲಾಡಳಿತವು ಗಮನಹರಿಸುತ್ತಿದೆ. ಮುಂಬರುವ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದು, ಎಲ್ಲರೂ ಒಟ್ಟಾಗಿ ಕೊರೊನಾ ಎದುರಿಸಿ ಸರ್ಕಾರಕ್ಕೆ ನೆರವಾಗಬೇಕು ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊಸಪೇಟೆ ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್, ಹೊಸಪೇಟೆಯ ಆರೋಗ್ಯ ಕೇಂದ್ರದಲ್ಲಿ ಹಾಸಿಗೆ ವ್ಯವಸ್ಥೆಗೆ ಸಿದ್ಧತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಹಾಸಿಗೆ ವ್ಯವಸ್ಥೆ ಒದಗಿಸಲು ಸರ್ಕಾರ ಹೊರಡಿಸಿದ ಸುತ್ತೋಲೆ ಅನ್ವಯ ಖಾಸಗಿ ಹೋಟೆಲ್ ಮತ್ತು ಆಸ್ಪತ್ರೆಗಳು ಕನಿಷ್ಟ 15 ರಿಂದ 20 ಹಾಸಿಗೆಗಳನ್ನು, ಅವಶ್ಯವಿದ್ದಲ್ಲಿ ಆಕ್ಸಿಜನ್ ವ್ಯವಸ್ಥೆ ಒದಗಿಸಿ ಆಡಳಿತದೊಂದಿಗೆ ಸಹಕರಿಸಬೇಕು ಎಂದರು.
ಹೊಸಪೇಟೆ ತಾಲೂಕು ಐಎಂಎ ಸಂಘದ ಅಧ್ಯಕ್ಷರಾದ ಡಾ. ಚಾಮರಾಜ್ ಮಾತನಾಡಿ, ಸರ್ಕಾರಕ್ಕೆ ಹಾಸಿಗೆ ಕಲ್ಪಿಸುವ ಸಲುವಾಗಿ ಐಎಂಎ ಸಂಘವು ಈಗಾಗಲೇ ಸಭೆ ನಡೆಸಿದೆ. ಸಂಕ್ಲಾಪುರದಲ್ಲಿರುವ ಐಎಂಎ ಸಭಾಂಗಣದಲ್ಲಿ ಸೋಂಕಿತರಿಗಾಗಿ 20 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದರು.
ತಹಶೀಲ್ದಾರ್ ಹೆಚ್. ವಿಶ್ವನಾಥ್ ಮಾತನಾಡಿ, ಈ ಹಿಂದೆ ಕೊರೊನಾ ಆರಂಭಿಕದ ದಿನಗಳಲ್ಲಿ ನಗರದ ಹಲವು ಹೋಟೆಲ್ ಮಾಲಿಕರು ಕ್ವಾರಂಟೈನ್ ಒಳಪಟ್ಟವರಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದರು. ಅಂತಯೇ ಮುಂದಿನ ದಿನಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ನೆರವಾಗಬೇಕೆಂದು ತಿಳಿಸಿದರು.