ಹೊಸಪೇಟೆ : ಹಬ್ಬದಲ್ಲಿ ಹೂ ಸೇರಿದಂತೆ ಇತರೆ ವಸ್ತುಗಳ ಖರೀದಿ ಜೋರಾಗಿತ್ತದೆ. ಈ ವೇಳೆ ಗುಂಪು-ಗುಂಪಾಗಿ ಕೂಡುವುದು ಸಾಮಾನ್ಯ. ಹಾಗಾಗಿ ಇದು ಕೊರೊನಾ ಹರಡಲಿಕ್ಕೆ ದಾರಿ ಮಾಡಿಕೊಡಬಲ್ಲದು ಎಂಬುದನ್ನು ಮನಗೊಂಡಿರುವ ತೋಟಗಾರಿಕೆ ಇಲಾಖೆ ವೈರಸ್ ಪಸರಿಸುವ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ರೈತರ ಸಹಭಾಗಿತ್ವದೊಂದಿಗೆ ವಿನೂತನ ಹೆಜ್ಜೆಯನ್ನಿಟ್ಟಿದೆ. ಜನರ ಮನೆ ಬಾಗಿಲಿಗೆ ಚಂಡು ಹೂ ಮತ್ತು ಬಟನ್ ಗುಲಾಬಿ ಹೂ ತಲುಪಿಸುವ ಮೂಲಕ ಹೊಸ ಮಾರ್ಗ ಅನುಸರಿಸಿದೆ. ಈ ವಿನೂತನ ಹೆಜ್ಜೆಗೆ ಈಗ ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿವೆ.
ದಸರಾ ಹಬ್ಬದಲ್ಲಿ ಹೂಗಳ ಖರೀದಿ ಜೋರಾಗಿರುತ್ತದೆ. ಇಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಷ್ಟ. ಇದರಿಂದ ಕೊರೊನಾ ಹರಡು ಹರಡು ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ, ಗುಂಪು ಗುಂಪಾಗಿ ಸೇರೋದನ್ನು ತಪ್ಪಿಸಲು ತೋಟಗಾರಿಕೆ ಇಲಾಖೆ ರೈತರ ಸಹಭಾಗಿತ್ವದಲ್ಲಿ ಮನೆಗಳಿಗೆ ಹೂಗಳನ್ನು ತಲುಪಿಸುವ ನಿರ್ಧಾರ ಮಾಡಿದೆ. ರೈತರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರೇ ಸಾಕು ಮನೆ ಬಾಗಿಗೆ ಹೂಗಳು ಬರಲಿವೆ.
ಎಲ್ಲಿಲ್ಲಿ ಸೌಲಭ್ಯವಿದೆ?: ಹೊಸಪೇಟೆಯ ಅಮರಾವತಿ, ಹಳೇ ಅಮರಾವತಿ, ತಾಲೂಕಿನ ಹೊಸೂರು, ಕಂಪ್ಲಿ ಹಾಗೂ ಸುಗ್ಗೇನಹಳ್ಳಿಯಲ್ಲಿ ಮನೆ ಬಾಗಿಲಿಗೆ ಹೂವಿನ ಸುಗಂಧವನ್ನು ರೈತರು ಪಸರಿಸಲಿದ್ದಾರೆ. ರೈತರಿಗೆ ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೆ ಹೂಗಳು ಲಗ್ಗೆ ಇಡಲಿವೆ. ದರ ಸಹ ನಿಗದಿ ಮಾಡಲಾಗಿದೆ.
ಬಟನ್ ಗುಲಾಬಿ ಪ್ರತಿ ಕೆಜಿಗೆ 120 ರೂ. ಹಾಗೂ ಚಂಡು ಹೂ ಒಂದು ಕೆಜಿಗೆ 50 ರೂ. ನಿಗದಿ ಮಾಡಲಾಗಿದೆ. ಕನಿಷ್ಠ 5 ಕೆಜಿ ಬಟನ್ ಗುಲಾಬಿ ಹಾಗೂ 10 ಕೆಜಿ ಚಂಡು ಹೂ ಖರೀದಿಸಿದರೆ ರೈತರು ಮನೆಗೆ ಬಂದು ಹೂಗಳನ್ನು ತಲುಪಿಸಲಿದ್ದಾರೆ. ಒಂದು ವೇಳೆ ಇಷ್ಟೊಂದು ಖರೀದಿ ಮಾಡಲು ಸಾಧ್ಯವಿಲ್ಲದಿದ್ದರೆ ರೈತರು ಸೂಚಿಸುವ ಸ್ಥಳಕ್ಕೆ ಬಂದು ಹೂಗಳನ್ನು ಖರೀದಿಸಬಹುದಾಗಿದೆ.
- ಭರತೇಶ ರೆಡ್ಡಿ - ಅಮರಾವತಿ - 8317490426
- ಕೇಶವ್ - ಹಳೇ ಅಮರಾವತಿ - 9611823450
- ಪರಶುರಾಮ - ಹೊಸೂರು - 9740088229
- ಶಿವನಾಗ ಪ್ರಸಾದ - ಕಂಪ್ಲಿ - 9611441234
- ವೆಂಕಟೇಶ್ವರ - ಕಂಪ್ಲಿ - 998688945
- ವೇಣುಗೋಪಾಲ್ - ಸುಗ್ಗೇನಹಳ್ಳಿ - 9964644445 ರೈತರಿಗೆ ಕರೆ ಮಾಡಿ ಹೂಗಳನ್ನು ಖರೀದಿಸಬಹುದಾಗಿದೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನ: ದಸರಾ ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಾಗಿ ಗುಂಪಾಗಿ ಸೇರುತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಉಪಾಯಗಳನ್ನು ಹುಡುಕಿ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತೋಟಗಾರಿಕೆ ಇಲಾಖೆಗೆ ಮಾರ್ಗದರ್ಶನ ಮಾಡಿದ್ದರು. ಅದರಂತೆ ಅಧಿಕಾರಿಗಳು ವಿನೂತನ ಪ್ರಯೋಗವನ್ನು ಜಾರಿಗೆ ತಂದಿದ್ದಾರೆ.
ಹೊಸಪೇಟೆಯಲ್ಲಿ ಮೊದಲ ಪ್ರಯೋಗ: ಹೊಸಪೇಟೆಯಲ್ಲಿ ತೋಟಗಾರಿಕೆ ಇಲಾಖೆ ಮನೆಬಾಗಿಲಿಗೆ ಹೂಗಳನ್ನು ತಲುಪಿಸುವ ಕಾರ್ಯಕ್ಕೆ ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದಿದ್ದಾರೆ. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶರಣಬಸಪ್ಪ ಭೋಗಿ ಅವರು ಹೊಸಪೇಟೆಯಲ್ಲಿ ಜಾರಿಗೆ ತಂದಿರುವ ನೂತನ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಬಳ್ಳಾರಿ ಜಿಲ್ಲೆಯ ತಾಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹೂಗಳನ್ನು ಮನೆಗೆ ತಲುಪಿಸುವ ಕಾರ್ಯ ಮಾಡಿ ಎಂದು ಸೂಚಿಸಿದ್ದಾರೆ.
ಕೊರೊನಾ ಬಗ್ಗೆ ತಾತ್ಸಾರ ಸಲ್ಲದು: ತಾಲೂಕಿನಲ್ಲಿ ಕೊರೊನಾ ಪ್ರಮಾಣ ತಗ್ಗಿದೆ. ಪ್ರತಿದಿನ 20 ರಿಂದ 30 ಪ್ರಕರಣಗಳು ಕಂಡು ಬರುತ್ತಿವೆ. ಸದ್ಯ 191 ಕೊರೊನಾ ಪ್ರಕರಣಗಳು ಇವೆ. ಆದರೆ, ಯಾವುದೇ ಕಾರಣಕ್ಕೂ ಕೊರೊನಾ ವಿಷಯದಲ್ಲಿ ದಸರಾ ಹಬ್ಬ ಸಂದರ್ಭದಲ್ಲಿ ಮೈಮರೆಯಬಾರದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಮರೆಯಬಾರದು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೂಗಳನ್ನು ಮನೆಗೆ ತಲುಪಿಸುವ ಕಾರ್ಯ ಈ ದಿನದಿಂದಿಂದ ಪ್ರಾರಂಭಮಾಡಲಾಗಿದೆ. ಈಗಾಗಲೇ ರೈತರಿಗೆ ಕರೆಗಳು ಬಂದಿವೆ. ನೂತನ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೊಸಪೇಟೆ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಂದ್ರ ಅವರು ಹರ್ಷ ವ್ಯಕ್ತಪಡಿಸಿದರು.