ವಿಜಯನಗರ: ವಿಶ್ವವಿಖ್ಯಾತ ಹಂಪಿ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಹಂಪಿಯಲ್ಲೀಗ ಇಂದಿನಿಂದ ಜುಲೈ 16ರ ವರೆಗೆ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ ಶೃಂಗಾರಗೊಂಡಿದೆ.
ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನ ಜಿ-20 ನಿಮಿತ್ತ ಹಂಪಿಯಲ್ಲಿ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಜಿ-20 ಶೃಂಗಸಭೆಗಾಗಿ ಹಂಪಿಯಲ್ಲಿ ಏನೆಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.
ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತೀ ಮುಖ್ಯವಾದ ಜಿ 20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16ರ ವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿವೆ.
ಹೀಗಾಗಿ ವಿಶ್ವವಿಖ್ಯಾತ ಹಂಪಿಯಲ್ಲೀಗ ಸಿದ್ಧತೆಗಳನ್ನ ಮಾಡಲಾಗಿದೆ. ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದ್ದು, ವಿಶ್ವ ವಿಖ್ಯಾತ ಹಂಪಿ ಇದೀಗ ಜಿ-20 ಶೃಂಗಸಭೆಗೆ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆ: ಜಿ-20 ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು. 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಭಾಗಿಯಾಗಲಿದ್ದಾರೆ. ಹೀಗಾಗಿ ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ತಯಾರಿ ಮಾಡಲಾಗಿದೆ. ಈ ಶೆರ್ಪಾ ಸಭೆಯು 'ವಸುದೈವ ಕುಟುಂಬಕಂ' ಎಂಬ ಧ್ಯೇಯದಡಿ, 'ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ' ಎಂಬ ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ 13 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿವೆ.
ಹಂಪಿ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾಗಳ ಹಾರಾಟ ನಿಷೇಧ: ಶೃಂಗಸಭೆಯ ವೇಳೆ ಮೂರು ದಿನಗಳ ಕಾಲ ಹಂಪಿಯ ಐತಿಹಾಸಿಕ ಮಹತ್ವ ಸಾರಲಾಗುತ್ತದೆ. ಹಾಗೂ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಗತವೈಭವ ಸಾರಲಾಗುತ್ತಿದೆ. ಶೃಂಗಸಭೆಗೆ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿರುವುದರಿಂದ ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆಗಾಗಿ ವಿವಿಧ ಹಂತದ 1,076 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ಶೃಂಗಸಭೆಯ ಅವಧಿ ವೇಳೆ ಹಂಪಿ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾಗಳ ಹಾರಾಟ ಸಹ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸ್ಮಾರಕಗಳ ಸುತ್ತಲಿನ ಪ್ರದೇಶಗಳ ಸ್ವಚ್ಛತೆ: ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದರಿಂದ ವಿಜಯ ವಿಠಲ ಮಂದಿರದಲ್ಲಿರುವ ಸಪ್ತಸ್ವರ ಮಂಟಪ ಹಾಗೂ ಕಲ್ಲಿನ ರಥದ ಕಾಮಗಾರಿ ಸಂಪೂರ್ಣವಾಗಿದ್ದು, ಕಲ್ಲಿನ ರಥದ ಸುತ್ತಲೂ ಕಟ್ಟಿಗೆಯ ಬೇಲಿ ನಿರ್ಮಾಣ ಮಾಡಲಾಗಿದೆ.