ವಿಜಯನಗರ: ತ್ರಿವಳಿ ರಾಜ್ಯಗಳಿಗೆ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ಒಳಹರಿವಿನ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭರವಸೆ ಮೂಡಿದೆ. ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದ್ದಂತೆ ಇತ್ತ ರೈತರು ಮೊದಲನೆ ಬೆಳೆ ಭತ್ತದ ನಾಟಿಗೆ ಗದ್ದೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಲಾಶಯಕ್ಕೆ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು: ಆರಂಭದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ತುಂಗಭದ್ರಾ ಜಲಾಶಯ ತುಂಬುತ್ತದೋ ಇಲ್ಲವೋ ಎಂಬ ನಿರಾಸೆಯಲ್ಲಿದ್ದ ರೈತರಿಗೆ ಕೊಂಚ ಆಶಾಭಾವನೆ ಚಿಗುರಿದೆ. ಮಳೆನಾಡು ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ತುಂಗಭದ್ರಾ ಒಡಲಲ್ಲಿ ಭತ್ತದ ನಾಟಿ ಸೇರಿ ಇತರ ಬೆಳೆ ಬಿತ್ತನೆಗೆ ಭಾರಿ ಸಿದ್ಧತೆ ನಡೆದಿದೆ. ಈಗಾಗಲೇ ಕೊಳವೆಬಾವಿ ಇರುವ ಜಮೀನುಗಳಲ್ಲಿ ಭತ್ತದ ಸಸಿ ಮಡಿಗಳು ಹಾಕಿಕೊಂಡಿರುವ ರೈತರು, ಕೆಲ ದಿನಗಳಿಂದ ನಾಟಿ ಕಾರ್ಯ ಶುರು ಮಾಡಿದ್ದಾರೆ.
16.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ಭತ್ತ ಬೆಳೆ ಬೆಳೆಯಲಾಗುತ್ತದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ ನಾಟಿ ಕಾರ್ಯ ಕೂಡ ಆರಂಭವಾಗಿದೆ. ಅಚ್ಚಕಟ್ಟು ಪ್ರದೇಶದಲ್ಲಿ ರಾಜ್ಯದಲ್ಲಿ 9.15 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಇದ್ದರೆ, ಆಂಧ್ರ ಪ್ರದೇಶದಲ್ಲಿ 6.50 ಲಕ್ಷ ಹೆಕ್ಟೇರ್, ತೆಲಂಗಾಣದಲ್ಲಿ 87 ಸಾವಿರ ಹೆಕ್ಟೇರ್ ಪದೇಶ ಒಟ್ಟು 16.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ತುಂಗಭದ್ರಾ ಜಲಾಶಯವನ್ನು ನಂಬಿದ್ದಾರೆ. ಈ ಪೈಕಿ ಅಂದಾಜು 12 ಲಕ್ಷ ಹೆಕ್ಟೇರ್‌ನಲ್ಲಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದ್ದರಿಂದ ಮೊದಲನೇ ಬೆಳೆಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ರೈತರು ಈಗಾಗಲೇ ಮಾಡಿಕೊಂಡಿದ್ದಾರೆ.
ವಾರದಲ್ಲಿ 18 ಟಿಎಂಸಿ ನೀರು: ಜಲಾಶಯಕ್ಕೆ ಮೊದಲ ಬಾರಿಗೆ ಕಳೆದ ಮೇ 07ರಂದು 366 ಕ್ಯೂಸೆಕ್ ಒಳಹರಿವು ಆರಂಭವಾಗಿತ್ತು. ನಂತರ ಕೆಲ ದಿನಗಳಿಂದ ಒಳಹರಿವು ಜಲಾಶಯಕ್ಕೆ ಮುಂಗಾರು ಮುನಿಸಿನಿಂದ ಸಂಪೂರ್ಣ ಕಡಿತವಾಯಿತು. ನಂತರ 200 ಕ್ಯೂಸೆಕ್ ಆಸುಪಾಸು ಇದ್ದ ಒಳಹರಿವು ಜು.10ಕ್ಕೆ 9892 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂತು.
ಒಂದು ವಾರ ಕಾಲ ಏರಿಳಿತದಲ್ಲಿ ಇದ್ದ ಒಳ ಹರಿವು ಶನಿವಾರ 41 ಸಾವಿರ ಕ್ಯೂಸೆಕ್ ಹೆಚ್ಚಾಯಿತು. ಭಾನುವಾರ 59,500 ಕ್ಯೂಸೆಕ್ ಹೆಚ್ಚಾಗಿ, 21.356 ಟಿಎಂಸಿ ನೀರು ಸಂಗ್ರಹವಾಗಿದೆ. 10 ದಿನದಲ್ಲಿ 18 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದರಿಂದ ರೈತರಲ್ಲಿ ಜಲಾಶಯ ತುಂಬುವ ಆಶಾಭಾವನೆ ಮೂಡಿದೆ. ಇತ್ತ ತುಂಗಭದ್ರಾ ಜಲಾಶಯ ತುಂಬುವುದು ಖಚಿತವಾಗುತ್ತಿದ್ದಂತೆ ವಿಜಯನಗರ, ಬಳ್ಳಾರಿ, ರಾಯಚೂರು ಕೊಪ್ಪಳ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂಓದಿ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಚುರುಕುಗೊಂಡ ಮಳೆ.. ಲಿಂಗನಮಕ್ಕಿಗೆ ಒಂದೇ ದಿನ ಮೂರುವರೆ ಅಡಿ ನೀರು