ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಕಲ್ಲಿನ ತೇರು ರಾಜ್ಯಕ್ಕೆ ಒಂದು ಐಕಾನ್ ಇದ್ದಂತೆ. ಹಂಪಿಗೆ ಆಗಮಿಸಿದವರು ಇಲ್ಲಿನ ಶಿಲ್ಪಕಲೆಯನ್ನು, ಕಲ್ಲಿನ ತೇರನ್ನು ನೋಡದೇ ತೆರಳುವುದಿಲ್ಲ. ಅಷ್ಟೊಂದು ಆಕರ್ಷಣೆ ಹಾಗು ಮನ್ನಣೆಯನ್ನು ಈ ವಿಜಯ ವಿಠ್ಠಲ ದೇವಸ್ಥಾನ ಹೊಂದಿದೆ.
ಇಲ್ಲಿನ ಕಂಬಗಳ ಮೂಲಕ ಹೊರ ಹೊಮ್ಮುವ ನಾದ ಇಡೀ ಜಗತ್ತಿಗೆ ಅಚ್ಚರಿಯಾಗಿ ಉಳಿದಿದೆ. ಇಮ್ಮಡಿ ದೇವರಾಯ ಕಾಲದಲ್ಲಿ ದೇವಸ್ಥಾನ ಸ್ಥಾಪನೆಯಾಗಿರುವುದಕ್ಕೆ ದಾಖಲೆ ಸಿಗುತ್ತವೆ. ಎರಡನೇಯ ದೇವರಾಯ ದಂಡನಾಯಕ ಪ್ರೋಲುಗಂಟಿ ತಿಪ್ಪನು ಈ ದೇವಾಲಯದ ಭೋಗಮಂಟಪಗಳನ್ನು ಕಟ್ಟಿಸಿದ್ದಾನೆ ಎಂದು ಹೇಳಲಾಗುತ್ತದೆ. ವಿಠ್ಠಲನ ರೂಪವಾದ ವಿಷ್ಣುವಿನ ದೇವಾಲಯದಲ್ಲಿ ಯಾವ ವಿಗ್ರಹವು ನಮಗೆ ಕಾಣ ಸಿಗುವುದಿಲ್ಲ. ಕ್ರಿ.ಶ. 1565ರ ರಕ್ಕಸಗಿ-ತಂಗಡಗಿ ಯುದ್ಧವರೆಗೂ ಈ ದೇವಾಲಯದಲ್ಲಿ ಪೂಜೆ - ಪುನಸ್ಕಾರಗಳು ನಡೆಯುತ್ತಿರುವ ಕುರಿತು ದಾಖಲೆಗಳು ಲಭ್ಯವಾಗುತ್ತವೆ.
ದೇವಸ್ಥಾನವನ್ನು ದೀರ್ಘ ಚತುರಸ್ರಾಕಾರದ ಪ್ರಾಕಾರದಲ್ಲಿದೆ. ದೇವಾಲಯದ ಪೂರ್ವ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಗೋಪರಗಳು ಭಗ್ನಗೊಂಡಿವೆ. ಪ್ರಾಕಾರದ ಒಳಾಂಗಣದಲ್ಲಿ ಅದರ ಗೋಡೆಗೆ ಹೊಂದಿಕೊಂಡಂತೆ ಕಂಬಗಳ ಮಂಟಪವಿದೆ. ಆವರಣದ ಮಧ್ಯ ಭಾಗದಲ್ಲಿ ವಿಠಲ ದೇವಾಲಯವಿದ್ದು, ಎಡಭಾಗದಲ್ಲಿ ಅಮ್ಮನವರ ದೇವಸ್ಥಾನವಿದೆ.
56 ಕಂಬಗಳಿಂದ ನಿರ್ಮಿಸಲಾದ ಮಹಾ ಮಂಟಪ:
ತೆರೆದ ಮಹಾ ಮಂಟಪವು 56 ಕಂಬಗಳಿಂದ ನಿರ್ಮಿಸಲಾಗಿದ್ದು, ಪ್ರತಿ ಕಂಬವು 3.6 ಮೀಟರ್ ಎತ್ತರದಲ್ಲಿದೆ. ಅವುಗಳಲ್ಲಿ 40 ಕಂಬಗಳು ಸಮಾನಾಂತರದಲ್ಲಿದ್ದು, ಮಂಟಪಗಳನ್ನು ಹಜಾರಗಳಾಗಿ ವಿಂಗಡಿಸಲಾಗಿದೆ. ಉಳಿದ 16 ಕಂಬಗಳ ಮಧ್ಯದಲ್ಲಿ ಆಯಾಕಾರದ ಸಭಾಂಗಣವನ್ನು ನಿರ್ಮಿಸಲಾಗಿದೆ. ಈ ಕಂಬಗಳು ವಿಜಯನಗರ ಶೈಲಿಯಿಂದ ಕೂಡಿವೆ.
ಉಪಕಂಬಗಳಿಂದ ಹೊರಹೊಮ್ಮುತ್ತೆ ಸಪ್ತಸ್ವರನಾದ:
ಇನ್ನೊಂದು ಸ್ತಂಭ ವಿನ್ಯಾಸದಲ್ಲಿ ಒಂದೇ ಕಂಬವು, ತನ್ನಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಉಪಕಂಬಗಳನ್ನು ಹೊಂದಿದೆ. ಈ ಉಪಕಂಬಗಳನ್ನು ಬೆರಳಿನಿಂದ ಜೋರಾಗಿ ಬಾರಿಸಿದಾಗ ಸಪ್ತಸ್ವರನಾದ ಹೊರ ಹೊಮ್ಮುವುದು ಕಲಾ ಸಂಸ್ಕೃತಿಗೆ ಸಾಕ್ಷಿಯಾಗಿದೆ. ದಕ್ಷಿಣ ದಿಕ್ಕಿನ 100 ಕಂಬಗಳ ಮಂಟಪ ಸರಳವಾಗಿದ್ದು, ಕೃಷ್ಣದೇವರಾಯರ ಕಾಲ ಕ್ರಿ.ಶ.1516ರಲ್ಲಿ ನಿರ್ಮಿಸಲಾಗಿದೆ.
ಕಲ್ಲಿನ ರಥ:
ದೇವಾಲದ ಮುಂಭಾಗ ಕಲ್ಲಿನ ರಥವನ್ನು ಕಾಣಬಹುದು. ಸುಂದರ ಕೆತ್ತನೆವುಳ್ಳ ರಥ ಇದಾಗಿದೆ. ವೈಷ್ಣವ ದೇವಾಲಯಗಳ ಮುಂದೆ ಗರುಡನ ಒಂದು ಸಣ್ಣ ದೇವಸ್ಥಾನವನ್ನು ಕಾಣುತ್ತೇವೆ. ಆದರೆ, ಕಲ್ಲಿನ ರಥವೇ ಗರುಡನಿಗೆ ದೇವಸ್ಥಾನವಾಗಿ ಮಾರ್ಪಾಡಾಗಿದೆ. ರಥದ ಒಳಭಾಗ ಗರಡ ವಿಗ್ರಹವಿದೆ. ಮರದ ರಥವನ್ನು ಸುಂದರವಾಗಿ ಕಲ್ಲಿನ ಕೆತ್ತನೆ ಮಾಡಿರುವುದು ನೋಡಗರನ್ನು ನಿಬ್ಬೆರಗಾಗಿಸುತ್ತದೆ. ಅಲ್ಲದೇ, ಗರ್ಭ ಗುಡಿ ಒಳಗಡೆ ಹೋಗಲು ಏಣಿಯನ್ನು ರಚಿಸಿರುವುದು ಕಲಾ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.
ಸಂಗಮರ ಕಾಲದಲ್ಲಿ ಒಂದು ಸಣ್ಣ ದೇವಾಲಯವಾಗಿ ವಿಠ್ಠಲ ಮಂದಿರವನ್ನು ನಿರ್ಮಿಸಲಾಗಿತ್ತು. ಕಾಲ ಕ್ರಮೇಣ ದೇವಸ್ಥಾನ ಹೆಚ್ಚಿನ ವಿಸ್ತಾರವನ್ನು ಹೊಂದುತ್ತಾ ಹೋಗುತ್ತದೆ. 14ನೇ ಶತಮಾನದ ಪ್ರಾರಂಭದಲ್ಲಿ ದೇವಾಲಯದ ಕುರಿತು ಹರಿಭಟ್ಟನ ಉತ್ತರ ನರಸಿಂಹ ಪುರಾಣದಿಂದ ಖಚಿತತೆ ಸಿಗುತ್ತದೆ. ಕ್ರಿ.ಶ.1516ರ ಶಾಸನದಲ್ಲಿ, ಕೃಷ್ಣದೇವರಾಯನು ಈ ದೇವರಿಗೆ ಅನೇಕ ದಾನದತ್ತಿಗಳನ್ನು ನೀಡಿ, ಚಿನ್ನಾದೇವಿ ಗೋಪುರಗಳನ್ನು ನಿರ್ಮಿಸಿ, ದೇವರಿಗೆ ಚಿನ್ನದ ಹರಿವಾಣ ಮತ್ತು ಬೆಳ್ಳಿಯ ಪಾತ್ರೆಗಳನ್ನು ನೀಡಿರುವುದು ತಿಳಿದು ಬರುತ್ತದೆ. ಕ್ರಿ.ಶ.1532 ರ ಶಾಸನ, ಮಾಧ್ವ ಗುರುಗಳಾದ ವ್ಯಾಸತೀರ್ಥರು ವಿಠ್ಠಲ ದೇವಾಲಯದಲ್ಲಿ ಯೋಗವರದನರಸಿಂಹ ದೇವರನ್ನು ಪ್ರತಿಷ್ಠಾಪಿಸಿರುವುದು ತಿಳಿಸುತ್ತದೆ. ಒಟ್ಟಿನಲ್ಲಿ ವಿಜಯನಗರ ಕಾಲದಲ್ಲಿ ವಿಠ್ಠಲನ ದೇಗುಲ ಶ್ರೀಮಂತ ಮಂದಿರವಾಗಿತ್ತು ಎಂಬುದು ತಿಳಿಯಲೇಬೇಕಾದ ವಿಷಯ ಎನ್ನುತ್ತಾರೆ ಇಲ್ಲಿನ ಸಂಶೋಧಕರು.