ಬಳ್ಳಾರಿ: ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಆಡಳಿತಾತ್ಮಕ ಕಾರ್ಯ ಚಟುವಟಿಕೆಗೆ ಅಡ್ಡಿಪಡಿಸಿದ ಪ್ರಗತಿಪರ ಸಂಘಟನೆ ಯುವ ಮುಖಂಡರ ವಿರುದ್ಧ ಕುಲಸಚಿವ ಸುಬ್ಬಣ್ಣ ರೈ ಅವರು ಬುಧವಾರ ಸಂಜೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಗತಿಪರ ಸಂಘಟನೆಯ ಒಕ್ಕೂಟದ ವಿ.ಅಂಬರೀಷ, ರಮೇಶ ನಾಯಕ, ಜಿ.ಸುರೇಶ, ಸರೋವರ ಬೆಂಕಿಕೆರೆ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಅತಿಕ್ರಮವಾಗಿ ಪ್ರವೇಶಿಸಿ, ಕಚೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ವಿವಿ ವಿರುದ್ಧ ಘೋಷಣೆಗಳನ್ನು ಕೂಗಿ ವಿಶ್ವವಿದ್ಯಾಲಯದ ಘನತೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬುಧವಾರ ನಡೆಸಿದ ಹೋರಾಟದಲ್ಲಿ ಸಂಘಟನಾಕಾರರ ಈ ಬೇಡಿಕೆಗಳು ಸರ್ಕಾರದ ನಿಯಮಾವಳಿ ಮತ್ತು ವಿದ್ಯಾರ್ಥಿಗಳ ಹಕ್ಕುಗಳಿಗೆ ಪೂರಕವಾಗಿಲ್ಲ. ಅಲ್ಲದೇ, ವಿದ್ಯಾರ್ಥಿಗಳ ಹಕ್ಕುಗಳಿಗೆ ಯಾವುದೇ ತೆರನಾದ ಬಾಧಕವಾಗಿಲ್ಲ. ಗುರುವಾರ ನಡೆಸುವ ಅನಿರ್ದಿಷ್ಟಾವಧಿ ಧರಣಿ, ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದು ನಿಯಮ ಬಾಹಿರವಾಗಿದ್ದು, ಮುನ್ನೆಚ್ಚರಿಕೆ ಕ್ರಮವಹಿಸಿ ಹಾಗೂ ಸಂಘಟನಾಕರರ ವಿಚಾರಣೆ ನಡೆಸಿ ಕಾನೂನು ರಿತ್ಯಾ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.