ಹೊಸಪೇಟೆ: ಕನ್ನಡ ರಾಜ್ಯೋತ್ಸವದಂದು ವಿಜಯನಗರ ಜಿಲ್ಲೆ ಘೋಷಣೆಯಾಗುವ ಜನರ ನಿರೀಕ್ಷೆ ಹುಸಿಯಾಗಿದೆ. ಕೆಲ ದಿನಗಳ ಹಿಂದೆ ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೂತನ ವಿಜಯನಗರ ಜಿಲ್ಲಾ ಘೋಷಣೆ ಕುರಿತ ಪ್ರಸ್ತಾವನೆಯ ಪುಸ್ತಕ ನೀಡಿದ್ದರು.
![vijayanagara](https://etvbharatimages.akamaized.net/etvbharat/prod-images/kn-hpt-02-vijayanagara-district-dream-of-kannada-rajyotsavam-expectation-of-people-on-the-field-story-vsl-ka10031_01112020141709_0111f_01084_667.jpg)
![vijayanagara](https://etvbharatimages.akamaized.net/etvbharat/prod-images/kn-hpt-02-vijayanagar-district-dream-of-kannada-rajyostavama-expectation-of-people-on-the-field-story-vsl-ka10031_01112020144029_0111f_1604221829_710.jpg)
ವಿಜಯನಗರ ಕ್ಷೇತ್ರದ ಜನರು ಜಿಲ್ಲೆ ಘೋಷಣೆ ಆಗುವುದನ್ನು ಕಾತರದಿಂದ ಎದುರು ನೋಡುತ್ತಿದ್ದರು. ಆದರೆ, ಜಿಲ್ಲೆ ಘೋಷಣೆ ಆಗುವ ಯಾವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ. ಸಚಿವ ಆನಂದ ಸಿಂಗ್ ಹಲವು ದಿನಗಳಿಂದ ಶೀಘ್ರದಲ್ಲಿ ವಿಜಯನಗರ ಜಿಲ್ಲೆ ಘೋಷಣೆಯಾಗಲಿದೆ ಎಂದು ಪದೇ ಪದೆ ಹೇಳಿಕೊಂಡು ಬರುತ್ತಿದ್ದಾರೆ. ಹೀಗಾಗಿ ನವೆಂಬರ್ 1 ಕ್ಕೆ ನೂತನ ಜಿಲ್ಲೆ ಘೋಷಣೆ ಕುರಿತು ಹೆಚ್ಚಿನ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಸರ್ಕಾರದಿಂದ ನೂತನ ಜಿಲ್ಲೆಯ ರಚನೆ ಕುರಿತು ಒಂದು ಹೇಳಿಕೆ ಸಹ ಹೊರ ಬಿದ್ದಿಲ್ಲ.
![vijayanagara](https://etvbharatimages.akamaized.net/etvbharat/prod-images/kn-hpt-02-vijayanagar-district-dream-of-kannada-rajyostavama-expectation-of-people-on-the-field-story-vsl-ka10031_01112020144029_0111f_1604221829_1047.jpg)
ವಿಜಯನಗರ ಜಿಲ್ಲೆಯ ನಕ್ಷೆ ವೈರಲ್: ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆ ನಕ್ಷೆ ವೈರಲ್ ಆಗಿತ್ತು. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿಯನ್ನು ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿತ್ತು. ಇನ್ನು ಬಳ್ಳಾರಿ ಜಿಲ್ಲೆಗೆ ಸಿರುಗುಪ್ಪ, ಕಂಪ್ಲಿ, ಕುರುಗೋಡು, ಬಳ್ಳಾರಿ, ಸಂಡೂರ ಅನ್ನು ಸೇರಿಸಲಾಗಿತ್ತು. ಈ ನಕ್ಷೆ ನೂತನ ವಿಜಯನಗರ ಜಿಲ್ಲಾ ಘೋಷಣೆ ಕುರಿತ ಪ್ರಸ್ತಾವನೆಯಲ್ಲಿದೆ. ಅಲ್ಲದೆ, ಹೊಸಪೇಟೆ ಹೃದಯ ಭಾಗದಲ್ಲಿ ರೋಟರಿ ಡಿಜಿಟಲ್ ಗಡಿಯಾರವನ್ನು ಅಳವಡಿಸಲಾಗಿದ್ದು, ಅದರಲ್ಲಿ ವಿಜಯನಗರಕ್ಕೆ ಸ್ವಾಗತ ಎಂಬ ಬರಹ ಬರುತ್ತಿದೆ.
![vijayanagara](https://etvbharatimages.akamaized.net/etvbharat/prod-images/kn-hpt-02-vijayanagar-district-dream-of-kannada-rajyostavama-expectation-of-people-on-the-field-story-vsl-ka10031_01112020144029_0111f_1604221829_380.jpg)
ಹೇಳಿಕೆಗೆ ಸೀಮಿತವಾದ ವಿಜಯನಗರ ಜಿಲ್ಲೆ: ಸೆಪ್ಟೆಂಬರ್ 19 ರಂದು ಹೊಸಪೇಟೆಯ ಜೋಳದರಾಶಿ ಗುಡ್ಡದಲ್ಲಿ ನಡೆದ ಹಸರೀಕರಣ ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್, ಶೀಘ್ರದಲ್ಲಿ ವಿಜಯನಗರ ಜಿಲ್ಲೆಯಾಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದರು. ಸೆಪ್ಟೆಂಬರ್ 21 ರಂದು ವಿಜಯನಗರ ಕಾಲೇಜಿನಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆಯಲ್ಲಿ ಸಹ, ವಿಜಯನಗರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ಅತೀ ಶೀಘ್ರದಲ್ಲಿ ಜಿಲ್ಲೆಯ ರಚನೆ ಆಗುವ ಮೂಲಕ ಈಡೇರಲಿದೆ. ಜಿಲ್ಲೆಯ ಕನಸು ಹುಸಿಯಾಗುವುದಿಲ್ಲ ಎಂದಿದ್ದರು.
ಮಾತು ಬದಲಿಸಿದ ಆನಂದ ಸಿಂಗ್: ಹಲವು ದಿನಗಳಿಂದ ವಿಜಯನಗರ ಜಿಲ್ಲೆಯ ಕುರಿತು ಸಚಿವ ಆನಂದ್ ಸಿಂಗ್ ಮಾತನಾಡುತ್ತಿದ್ದಾರೆ. ಆದರೆ, ರಾಜ್ಯೋತ್ಸವ ದಿನವಾದ ಇಂದು ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆಯ ನೀತಿ ಸಂಹಿತೆ ಇದೆ. ವಿಜಯನಗರ ಜಿಲ್ಲೆಯ ಕುರಿತು ಮಾತನಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಸಚಿವ ಆನಂದ್ ಸಿಂಗ್, ಜನರ ನಿರೀಕ್ಷೆಯನ್ನು ಹುಸಿಗೊಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ಫೇಸ್ಬುಕ್ನಲ್ಲಿ ಇಂದು ಹೊಸಪೇಟೆ ಕೇಂದ್ರ ಸ್ಥಾನದ ನೂತನ ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಾ? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಇವೆಲ್ಲಾ ಚುನಾವಣಾ ಅಜೆಂಡಾಗಳು ಅಷ್ಟೇ, ಯಾವ ಜಿಂದಾಲ್ ಭೂಮಿ ವಿಚಾರ ಇಲ್ಲ. ಜಿಲ್ಲೆಯೂ ರಚನೆಯಾಗಲ್ಲ ಎಂಬ ಕಾಮೆಂಟ್ ಗಳು ಬಂದಿವೆ.