ಹೊಸಪೇಟೆ: ಮೈಸೂರಿನಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದು, ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗೋರಸೇನಾ ವತಿಯಿಂದ ತಾಲೂಕಿನ ನಾಗಲಾಪುರದ ಗ್ರಾಮ ಪಂಚಾಯತ್ ಕಾರ್ಯದರ್ಶಿ ತೋಟಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ನಾಗಲಾಪುರದಿಂದ ಮೈಸೂರಿಗೆ ಕೆಲಸಕ್ಕೆ ಗುಳೆ ಹೋದಾಗ ಮೂರು ಮಕ್ಕಳು ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಜನ ಗುಳೆ ಹೋಗುತ್ತಿದ್ದು, ಜೊತೆಗೆ ಮಕ್ಕಳನ್ನು ಕರೆದುಕೊಂಡು ತೆರಳುತ್ತಿದ್ದಾರೆ. ಸ್ಥಳೀಯವಾಗಿ ಋತುಮಾನದ ಶಾಲೆಗಳಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಬಿಟ್ಟು ಗುಳೆ ಹೋಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತರ ಕುಟುಂಬಕ್ಕೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಯವರು ಪರಿಹಾರ ನೀಡಬೇಕು. ಜೊತೆಗೆ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಗಂಭೀರ ಆಲೋಚನೆ ಮಾಡಬೇಕು. ಸ್ಥಳೀಯವಾಗಿ ಉದ್ಯೋಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.