ಬಳ್ಳಾರಿ: ಐತಿಹಾಸಿಕ ವಸ್ತುಗಳನ್ನು ಶೇಖರಿಸಿಡಲು ಮ್ಯೂಸಿಯಂ ನಿರ್ಮಿಸಲಾಗುತ್ತದೆ. ಆದರೆ, ಗಣಿನಾಡು ಬಳ್ಳಾರಿಯ ವ್ಯಕ್ತಿಯೊಬ್ಬ ಗಣೇಶನಿಗಾಗಿಯೇ ಸಂಗ್ರಹಾಲಯ ಒಂದನ್ನು ರೂಪಿಸಿದ್ದಾರೆ. ಇಲ್ಲಿ 550 ಕ್ಕೂ ಅಧಿಕ ಗಣೇಶನ ಮೂರ್ತಿಗಳು ಕಾಣಸಿಗುತ್ತವೆ. ಹೌದು, ಬಳ್ಳಾರಿಯ ಆದರ್ಶ ನಗರದ ನಿವಾಸಿ ಅಶೋಕ್ ಬಚಾವತ್ ಎಂಬುವರರು ಗಣೇಶನ ವಿಗ್ರಹಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಇವರ ಬಳಿ 600 ಕ್ಕೂ ಅಧಿಕ ಬಗೆಬಗೆಯ ವಿಜ್ಞವಿನಾಶಕ ಮೂರ್ತಿಗಳಿವೆ.
21 ವರ್ಷಗಳಿಂದ ಗಣೇಶ ಮೂರ್ತಿ ಸಂಗ್ರಹ: ಅಶೋಕ್ ಬಚಾವತ್ ಅವರಿಗೆ ಚಿಕ್ಕಂದಿನಿಂದಲೂ ವಿನಾಯಕ ಅಂದ್ರೆ ಭಾರಿ ಪ್ರೀತಿ, ಭಕ್ತಿ. ಹೀಗಾಗಿ ಅವರು ಗಣೇಶನ ವಿಗ್ರಹಗಳನ್ನು ಕಳೆದ 21 ವರ್ಷಗಳಿಂದ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ಮನೆಯವರಿಗೆ ಇದು ವಿಚಿತ್ರ ಎನಿಸಿದರೂ, ತದನಂತರ ಅವರೂ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಇನ್ನು ಕಳೆದ 13 ವರ್ಷದಲ್ಲಿ ಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಮೂರ್ತಿಗಳನ್ನು ಇಡಲು ಸ್ಥಳವಿಲ್ಲದಂತಾಗಿದೆ. ಈ ಕಾರಣಕ್ಕಾಗಿ ಮಾಡಿಸಿದ್ದ ಶೋಕೇಸ್ ಕೂಡ ಭರ್ತಿಯಾಗಿದೆ. ಅಶೋಕ್ ಬಚಾವತ್ ಅವರು ಖರೀದಿ ಮಾಡಿ ತರುವ ಗಣೇಶನ ಮೂರ್ತಿಗಳು ಮನೆ ತುಂಬೆಲ್ಲಾ ಹರಡಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಶೋಕೇಸಲ್ಲಿ ಬಗೆಬಗೆಯ ಗಣೇಶ: ಅಶೋಕ್ ಬಚಾವತ್ ಅವರು ತರಹೇವಾರಿ ಗಣೇಶನ ಮೂರ್ತಿಗಳನ್ನು ಕಲೆಹಾಕಿದ್ದಾರೆ. ಮಣ್ಣು ಹಾಗೂ ಕಟ್ಟಿಗೆಯಲ್ಲದೆ, ಲೋಹದಿಂದ ಮಾಡಿದ ವಿನಾಯಕನೂ ಇಲ್ಲಿ ನೆಲೆ ನಿಂತಿದ್ದಾನೆ. ಆರಂಭದಲ್ಲಿ ಕಲ್ಲಿನ ಹಾಗೂ ಕಂಚಿನ ಸಣ್ಣ ಸಣ್ಣ ಮೂರ್ತಿಗಳನ್ನು ತಂದ ಬಚಾವತ್ ನಂತರದ ದಿನಗಳಲ್ಲಿ ಪಿಒಪಿ, ಶ್ರೀಗಂಧ, ಒಂಟೆಯ ಎಲುಬಿನಲ್ಲಿ ಮಾಡಲಾದ ಮೂರ್ತಿಗಳನ್ನು ಸಂಗ್ರಹಿಸಿದ್ದಾರೆ.
ಜೊತೆಗೆ ಹವಳ, ಅಡಿಕೆ, ಕಪ್ಪೆಚಿಪ್ಪು, ಮುತ್ತು, ಥರ್ಮಾಕೋಲ್, ಪೇಪರ್, ಹಿತ್ತಾಳೆ, ಕಬ್ಬಿಣ, ಬೆಳ್ಳಿ ಸೇರಿದಂತೆ ನಾನಾ ಪ್ರಕಾರದ ಗಣೇಶನನ್ನು ಕೂಡ ಮನೆಗೆ ಕರೆ ತಂದಿದ್ದಾರೆ.
ವರ್ಷಕ್ಕೊಮ್ಮೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹಬ್ಬವನ್ನು ಆಚರಿಸುವ ಜನರ ಮಧ್ಯೆ ನಿತ್ಯವೂ ಗಣೇಶನನ್ನು ಆರಾಧಿಸುವ ಮತ್ತು ಮೂರ್ತಿಗಳನ್ನು ಸಂಗ್ರಹ ಮಾಡುವ ಆಶೋಕ್ ಬಚಾವತ್ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ನೂರಾರು ಗಣನಾಯಕರು ಇರುವ ಈ ನಿವಾಸವನ್ನು ಗಣೇಶ ಮ್ಯೂಸಿಯಂ ಅಂತಲೇ ಕರೆಯಲಾಗುತ್ತದೆ.
ಓದಿ: ಆಂಧ್ರಪ್ರದೇಶದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಚಿನ್ನದ ಗಣಪತಿ