ಬಳ್ಳಾರಿ/ ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ಹಿರಿಯ ಕಲಾವಿದೆ ಮಂಜಮ್ಮ ಜೋಗತಿಯವರನ್ನ ಕರೆಯಿಸಿಕೊಂಡು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಸನ್ಮಾನಿಸಿದ್ದಾರೆ. ಗಾಲಿ ಜನಾರ್ದನ ರೆಡ್ಡಿಯವರೊಂದಿಗೆ ಪತ್ನಿ ಲಕ್ಷ್ಮಿ ಅರುಣಾ ಕೂಡ ಇದ್ದರು. ಬಳಿಕ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಜಾನಪದ ಕಲಾವಿದೆ ಮಂಜಮ್ಮ ಜೋಗತಿಗೆ ಅಭಿನಂದನೆ ಸಲ್ಲಿಸುವ ಅವಕಾಶ ದೊರಕಿರುವುದು ನಿಜಕ್ಕೂ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ ಎಂದರು.
ವಿಜಯನಗರ ಸಾಮ್ರಾಜ್ಯದ ಗತವೈಭವದ ಸಡಗರ ಸಂಭ್ರಮವನ್ನ ಕಂಡ ಬಳ್ಳಾರಿ ಸೀಮೆ ಅನೇಕ ಮಹಾನ್ ಕಲಾವಿದರ, ಸಾಹಿತಿ, ಬರಹಗಾರರನ್ನ ಕಂಡಿರುವ ಪುಣ್ಯ ಭೂಮಿ. ನಮ್ಮ ಕಾಳವ್ವ ಜೋಗತಿ, ತೊಗಲುಗೊಂಬೆ ಆಟದ ಬೆಳಗಲ್ ವೀರಣ್ಣ, ಬಳ್ಳಾರಿಯ ರಾಘವ, ಜೋಳದ ರಾಶಿ ದೊಡ್ಡನಗೌಡರು ಇಂದು ನಮ್ಮ ಮಂಜಮ್ಮ ಜೋಗತಿ ಸೇರಿದಂತೆ ಹೀಗೆ ಅನೇಕ ಮಹಾನ್ ಕಲಾವಿದರಿಗೆ ಜನ್ಮ ನೀಡಿದ ಪುಣ್ಯ ಭೂಮಿ ನಮ್ಮ ಬಳ್ಳಾರಿ ಜಿಲ್ಲೆ. ಇಂದು ನಮ್ಮ ಬಳ್ಳಾರಿಯ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರೋದು ಇಡೀ ನಮ್ಮ ಬಳ್ಳಾರಿ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ನನ್ನ ಜಿಲ್ಲೆಯ ಜನತೆ ಪರವಾಗಿ ಮಂಜಮ್ಮ ಜೋಗತಿ ಅವರನ್ನ ಅತ್ಯಂತ ತುಂಬು ಹೃದಯದಿಂದ ಸನ್ಮಾನಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಓದಿ : ಛಲಬೇಕು ಸಾಧಕನಿಗೆ.. ಕಾಲಿನಿಂದ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ದಿವ್ಯಾಂಗ..