ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಹಿಂದೆ ಒಬ್ಬ ಶಾಸಕನ ಸ್ವಾರ್ಥ ಪರತೆ ಹೆಚ್ಚಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಜಂಟಿಯಾಗಿ ದೂರಿದ್ದಾರೆ.
ಬಳ್ಳಾರಿಯ ಡಿಸಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ಮುಖಂಡರು, ಗಣಿ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮೊದಲು ಅರಿಯಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಕಿವಿಮಾತು ಹೇಳಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡೋದರಿಂದ ಹಂಪಿ ವಿರೂಪಾಕ್ಷನ ಹಾಗೂ ಎದುರು ಬಸವಣ್ಣನವರ ಬೇರೆ ಬೇರೆ ನೋಡೋದಕ್ಕೆ ನನಗಂತೂ ಬಹಳ ನೋವಾಗುತ್ತೆ. ಈ ಜಿಲ್ಲೆಯ ಕುರುಗೋಡಿನ ದೊಡ್ಡ ಬಸವೇಶ್ವರ ಪ್ರತೀಕವಾಗಿರುವ ಎದುರು ಬಸವಣ್ಣನವರ ಮೂರ್ತಿ ಇದೆ. ಹೀಗಾಗಿ, ನನಗೆ ಅವೆರಡನ್ನೂ ಪ್ರತ್ಯೇಕವಾಗಿ ನೋಡೋದಕ್ಕೆ ಆಗಲ್ಲ. ಅಖಂಡ ಬಳ್ಳಾರಿ ಜಿಲ್ಲೆಯಾಗಿಯೇ ಉಳಿಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಯಾಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಕಿಂಚಿತ್ತೂ ಕಾಳಜಿ ಇಲ್ಲ. ಸದ್ಯ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯ ಅಗತ್ಯ ಇಲ್ಲವೇ ಇಲ್ಲ. ತುಂಗಭದ್ರಾ ಜಲಾಶಯದ ಹೂಳೆತ್ತುವುದು. ಸಮಾನಾಂತರ ಜಲಾಶಯ, ಬಳ್ಳಾರಿ - ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕುಂಠಿತ ಆಗಿದೆ. ಹಾಗೂ ಹಂಪಿಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಏನ್ ಕ್ರಮವಹಿಸಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಪ್ರಶ್ನಿಸಿದ್ದಾರೆ.
ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಮಾತನಾಡಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಕಾಂಗ್ರೆಸ್ಸಿಗರ ವಿರೋಧವಿದೆ. ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿರುವ ಈ ಜಿಲ್ಲೆಯ ವಿಭಜನೆಯ ಹಿಂದೆ ಒಬ್ಬ ಶಾಸಕನ ಸ್ವಾರ್ಥ ಪರತೆ ಇದೆ. ಅದು ನಮ್ಮ ಪಾರ್ಟಿಯಲ್ಲಿದ್ದಕೊಂಡು ಇದನ್ನೇ ಬೇಡಿಕೆ ಇಟ್ಟಿದ್ದರು. ಅದು ಈಡೇರಿಲಿಲ್ಲ. ಈಗ ಈ ಪಾರ್ಟಿಗೆ ಬಂದಿದ್ದಾರೆ. ಅದನ್ನ ಈಡೇರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿರೋದು ನಿಜಕ್ಕೂ ಹಾಸ್ಯಾಸ್ಪದ. ಇದು ರಾಜಕೀಯ ಪ್ರೇರಿತವಾದ ಬೇಡಿಕೆಯಾಗಿದೆ ಎಂದು ಸೈಯದ್ ನಾಸೀರ್ ಹುಸೇನ್ ದೂರಿದ್ದಾರೆ.
ಇದೇ ವೇಳೆ, ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್. ಮಹಮ್ಮದ ರಫೀಕ್, ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹನುಮ ಕಿಶೋರ, ಮುಖಂಡರಾದ ವೆಂಕಟೇಶ ಹೆಗಡೆ, ಅಸುಂಡಿ ನಾಗರಾಜಗೌಡ, ಹುಮಾಯೂನ್ ಖಾನ್, ವಿವೇಕ್ ಇದ್ದರು.