ಬಳ್ಳಾರಿ: ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದ ರವಿ ಬೆಳೆಗೆರೆ ತಮ್ಮ ವೃತ್ತಿ ಬದುಕಿನಲ್ಲಿ ಎಂತಹ ಸವಾಲುಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಜಿಲ್ಲೆಯ ಹರಪನಹಳ್ಳಿ ಐಯ್ಯನಕೆರೆ ಬಳಿ ನಡೆದ ಈ ಘಟನೆಯೇ ಸಾಕ್ಷಿ.
2006ನೇ ಇಸವಿಯಲ್ಲಿ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ನಕಲಿ ಬಂಗಾರ ಕಳ್ಳರ ಗ್ಯಾಂಗ್ ಹರಪನಹಳ್ಳಿಯಲ್ಲಿ ಪತ್ತೆಯಾಗಿತ್ತು. ಆ ನಕಲಿ ಬಂಗಾರ ಕಳ್ಳರ ಗ್ಯಾಂಗ್ ಕುರಿತು ಸವಿಸ್ತಾರವಾಗಿ ವರದಿ ಮಾಡಿದ್ದ ರವಿ ಬೆಳಗೆರೆ ಅವರ ವರದಿಯನ್ನೇ ಸಾಕ್ಷೀಕರಿಸಿ ಪೊಲೀಸರು ಪ್ರಕರಣ ಭೇದಿಸಲು ಮುಂದಾಗಿದ್ದರು.
ಈ ಸಂದರ್ಭ ಕಳ್ಳರ ಗ್ಯಾಂಗ್ ಹಿರಿಯ ಪತ್ರಕರ್ತ ರವಿಬೆಳಗೆರೆ ಮೇಲೆ ದಾಳಿ ಮಾಡಿತ್ತು. ನಕಲಿ ಬಂಗಾರ ಕಳ್ಳರ ಜಾಲದ ಬೆನ್ನು ಹತ್ತಿ ಬೆಳಗೆರೆ ಹೊರಟಾಗ ನಡೆದ ಡೆಡ್ಲಿ ಅಟ್ಯಾಕ್ ಅದು. ಆಗ ರವಿ ಬೆಳಗೆರೆ ಅವರು ಕಳ್ಳರ ಮೇಲೆ ತಮ್ಮ ರಿವಾಲ್ವಾರ್ನಿಂದ ಗುಂಡು ಹಾರಿಸಿ ಪ್ರಾಣ ಉಳಿಸಿಕೊಂಡು ತಪ್ಪಿಸಿಕೊಂಡಿದ್ದರು.
ಈ ನಕಲಿ ಬಂಗಾರ ಕಳ್ಳರ ಗ್ಯಾಂಗ್ ಪತ್ತೆ ಕಾರ್ಯ ಹರಪನಹಳ್ಳಿಯ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿತ್ತು. ಆ ಸಮಯದಲ್ಲಿ ರವಿ ಬೆಳಗೆರೆ ಅರ್ಧರಾತ್ರಿ ಆಗಂತುಕರು ಎಂಬ ವಿಶೇಷ ಸಂಚಿಕೆ ಮಾಡಿದ್ದರು. ಅದರ ಒಂದು ಎಪಿಸೋಡ್ ಮಾಡಲು ಸ್ವತಃ ರವಿ ಬೆಳಗೆರೆ ಅವರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದರು. ನಕಲಿ ಬಂಗಾರ ಕೊಳ್ಳುವವರ ವೇಷದಲ್ಲಿ ಬೆಳಗೆರೆ ಹೋಗಿದ್ದರು. ಆರು ಮಂದಿ ಕಳ್ಳರ ಗ್ಯಾಂಗ್ ಕೆಜಿಗಟ್ಟಲೇ ನಕಲಿ ಬಂಗಾರ ತಂದಿತ್ತಂತೆ.
ಈ ಡೀಲ್ ನಡುವೆ ಕಳ್ಳರಿಗೆ ಬೆಳಗೆರೆ ಪೊಲೀಸ್ ಎಂಬ ಅನುಮಾನ ಬಂದಿತ್ತು. ಆಗ ಆರು ಮಂದಿ ಕಳ್ಳರ ಗ್ಯಾಂಗ್ ಏಕಾಏಕಿ ಬೆಳೆಗೆರೆ ಮೇಲೆ ದಾಳಿ ಮಾಡಿತ್ತು. ಅವರಿಂದ ತಪ್ಪಿಸಿಕೊಳ್ಳಲು ಆ ಕಳ್ಳರ ಗ್ಯಾಂಗ್ ಮೇಲೆ ಶೂಟ್ ಮಾಡಿದ್ದ ಬೆಳಗೆರೆ, ಕಳ್ಳರನ್ನ ಪೊಲೀಸರು ಸೆರೆ ಹಿಡಿಯಲು ಕಾರಣಕರ್ತರಾಗಿದ್ದರು.