ಬಳ್ಳಾರಿ: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆಗೆದು ಸೈಬರ್ ಖದೀಮರು ವಸೂಲಿಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಪಿಐ ಸುಭಾಷಚಂದ್ರ ಹೆಸರಿನಡಿ ನಕಲಿ ಖಾತೆ ಸೃಷ್ಟಿಸಿ ಫೇಸ್ಬುಕ್ನಲ್ಲಿಯೇ ಪರಿಚಯಸ್ಥರಿಂದ ಹಣ ಕೀಳಲು ಖದೀಮರು ಮುಂದಾಗಿದ್ದಾರೆ. ಪೊಲೀಸ್ ಸಮವಸ್ತ್ರ ಧರಸಿಕೊಂಡಿರುವ ಅನಾಮಧೇಯ ವ್ಯಕ್ತಿಯೋರ್ವ ಫೋಟೋ ಹಾಕಿ ನಕಲಿ ಖಾತೆ ಸೃಷ್ಟಿಸಿದ್ದಾನೆ. ಹಿಂದಿಯಲ್ಲಿ ಸಂಭಾಷಣೆ ನಡೆಸಿ ಹಣ ಕೀಳುತ್ತಿದ್ದ ಎನ್ನಲಾಗಿದೆ.
ಕೌಲ್ ಬಜಾರ್ ಸಿಪಿಐ ಸುಭಾಷಚಂದ್ರ ಆಪ್ತರೊಬ್ಬರಿಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ಹಣ ನೀಡುವಂತೆ ಕೇಳಿದ್ದಾನೆ. ನಿನಗ್ಯಾಕೆ ಹಣ ನೀಡಬೇಕು ಅಂತ ಕೇಳಿದಾಗಲೇ ಈ ವಿಷಯ ಬಹಿರಂಗಗೊಂಡಿದೆ. ಕೂಡಲೇ ಎಚ್ಚೆತ್ತ ಸಿಪಿಐ ಸುಭಾಷ ಚಂದ್ರ, ನಕಲಿ ಫೇಸ್ಬುಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ.