ಬಳ್ಳಾರಿ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡೇ ಬಂದಿದ್ದ ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮೂಲದ ಕೂಲಿಕಾರ್ಮಿಕ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದಾನೆ.
ಮಾಜಿ ಶಾಸಕ ಸಿರಾಜ್ಶೇಖ್ ಅವರು ಮರಿಯಮ್ಮನಹಳ್ಳಿ ಪಟ್ಟಣದ ಆಟೋರಿಕ್ಷಾ ಚಾಲಕರಿಗೆ ಸಹಾಯಹಸ್ತ ನೀಡಿ, ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ವಾಪಸಾಗುವ ಮಾರ್ಗದಲ್ಲಿ ಅಸ್ವಸ್ಥನಾದ ಕೂಲಿಕಾರ್ಮಿಕ ಯುವಕನು ಮಲಗಿಕೊಂಡ ಭಂಗಿಯನ್ನ ಕಂಡು ಮರುಗಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆ ಹಾಗೂ 108 ಆ್ಯಂಬುಲೆನ್ಸ್ ಸೇವೆಯ ನೆರವು ಕೋರಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿಂದ ಕಾಲ್ನಡಿಗೆಯಲ್ಲಿ ಬಂದ ಈತನಿಗೆ ಸಕಾಲದಲ್ಲಿ ಅನ್ನ-ನೀರು ದೊರಕದ ಕಾರಣ ಅತೀವ ಅಸ್ವಸ್ಥನಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲೇ ಮೂರ್ಛೆ ಹೋದ ಸ್ಥಿತಿಯಲ್ಲಿ ಮಲಗಿಕೊಂಡಿದ್ದನ್ನ ಕಂಡ ಮಾಜಿ ಶಾಸಕ ಸಿರಾಜ್ ಶೇಖ್ ಅವರು ಒಂದ್ ಕ್ಷಣ ದಿಗ್ಬ್ರಾಂತರಾಗಿದ್ದಾರೆ.
ಅಸ್ವಸ್ಥನಾಗಿ ಮಲಗಿದ್ದ ವ್ಯಕ್ತಿಗೆ ಮಾಜಿ ಶಾಸಕ ಸಿರಾಜ್ ಶೇಖ್ ಅವರು ನೀರು ಕುಡಿಸಿ ಮಾತಾಡಿಸಿದಾಗ, ಆತನು ತೆಲುಗು ಭಾಷೆಯಲ್ಲೇ ಮಾತನಾಡಿದ್ದಾನೆ. ಆ ವ್ಯಕ್ತಿಯ ಸ್ಥಿತಿಗತಿ ಗಮನಿಸಿದಾಗ ಸುಮಾರು ದೂರ ನಡೆದು ಬಂದಿರುವುದಾಗಿ ಶೇಖ್ ತಿಳಿಸಿದ್ದಾರೆ. 108 ಆ್ಯಂಬುಲೆನ್ಸ್ ವಾಹನದಲ್ಲಿ ಆತನನ್ನ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯ್ದು ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲೂ ಕೂಡ ಮಾಜಿ ಶಾಸಕ ಸಿರಾಜ್ ಶೇಖ್ ನೆರವಾಗಿದ್ದಾರೆ.