ಬಳ್ಳಾರಿ: ಮತದಾನ ಮಾಡುವಾಗ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಮಕ್ಕಳು ಒಳಗಾಗದೇ ಮತದಾನ ಮಾಡಬೇಕು ಎಂಬ ನಿಟ್ಟಿನಲ್ಲಿ ಇಂದು ಮತದಾನದ ಸ್ಪರ್ಧಾ ಚಟುವಟಿಕೆಗಳಾದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯನ್ನು ಬಳ್ಳಾರಿ ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ತಿಳಿಸಿದರು.
ನಗರದ ಮುನಿಸಿಪಲ್ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು. ರಾಷ್ಟ್ರೀಯ ಮತದಾರರ ದಿನಾಚರಣೆ 2020ರ ಪ್ರಯುಕ್ತ ಬಳ್ಳಾರಿ ಜಿಲ್ಲಾಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಾಗಾರವನ್ನು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಉಪಕಾರ್ಯದರ್ಶಿ, ಈ ಹಿಂದೆ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಮತದಾನದ ಬಗ್ಗೆ ಏನೆಲ್ಲಾ ಜಾಗೃತಿ ನೀಡಿದರೂ ಮತದಾನ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಮತದಾನ ಜಾಗೃತಿ ಮೂಡಿಸಿದರೆ ಅದರಿಂದ ಮುಂದೆ ನಡೆಯುವ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಏರಿಕೆ ಆಗಬಹುದು ಎಂದು ತಿಳಿಸಿದರು.
ನಿಮ್ಮ ಮನೆಯ ಬಾಗಿಲಿಗೆ ಚುನಾವಣೆಯ ಸಮಯದಲ್ಲಿ ಸೀರೆ, ಹಣ, ಮಧ್ಯ ಮತ್ತು ಇನ್ನಿತರ ಉಡುಗೊರೆಗಳನ್ನು ನೀಡಲು ಬರುತ್ತಾರೆ. ಅಂತಹ ಆಮಿಷಗಳಿಗೆ ಒಳಗಾಗಬೇಡಿ, ಹಾಗೆಯೇ ನಿಮ್ಮ ಪೋಷಕರಿಗೂ ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.
ಈ ಕಾರ್ಯಗಾರದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎಸ್.ಹೆಚ್. ಶರಣಬಸಪ್ಪ, ಡಿಡಿಪಿಯು ನಾಗರಾಜಪ್ಪ, ಪ್ರಾಂಶುಪಾಲ ಮೋಹನ್ ರೆಡ್ಡಿ, ಗೋಪಾಲ ಸಗರ್, ಕಾರ್ಯದರ್ಶಿ ವೆಂಕಟೇಶ ಹಾಜರಿದ್ದರು.