ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಗುಡ್ಡದ ಬೃಹತ್ ಕಲ್ಲು, ಬಂಡೆ ಮಧ್ಯೆ ಸಿಲುಕಿಕೊಂಡ ವ್ಯಕ್ತಿಯೋರ್ವ ನಾಲ್ಕು ಗಂಟೆಗಳ ಕಾಲ ನರಳಾಡಿದ ಘಟನೆ ಇಂದು ನಡೆದಿದೆ.
ಹೊಸಪೇಟೆ ತಾಲೂಕಿನ ಹಂಪಿಯ ಕಡಲೆಕಾಳು ಗಣೇಶ ಮೂರ್ತಿ ಮುಂಭಾಗದಲ್ಲಿನ ಶಿವರಾಮ ಅವಧೂತರ ಮಠದಲ್ಲಿ ಕಳೆದ ನಾಲ್ಕು ದಿನಗಳಕಾಲ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮದ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿತ್ತು. ಮದ್ಯವ್ಯಸನಿ ಆಗಿದ್ದ ಕೊಪ್ಪಳ ಜಿಲ್ಲೆಯ ಹುಲಿಗಿ ಮೂಲದ ದೇವೇಂದ್ರ ಎಂಬಾತ ಶಿಬಿರದಿಂದ ತಪ್ಪಿಸಿಕೊಳ್ಳಲು ಯತ್ನಿಸಲು ಹೋಗಿ ಬೃಹತ್ ಕಲ್ಲು, ಬಂಡೆಯೊಳಗೆ ಸಿಲುಕಿಕೊಂಡು ಸಾವಿನೊಂದಿಗೆ ನರಳಾಟ ಅನುಭವಿಸಿದ್ದಾನೆ.
ಸುಮಾರು 60ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದ ಶಿಬಿರದಲ್ಲಿ ಮದ್ಯವ್ಯಸನಿ ಬಂಡೆಗಳ ನಡುವೆ ಪೇಚಿಗೆ ಸಿಲುಕಿದ ಘಟನೆಯಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಮದ್ಯ ವ್ಯಸನಿ ದೇವೇಂದ್ರ, ಮಠದ ಪಕ್ಕದಲ್ಲಿರುವ ಎರಡು ಬೃಹತ್ ಬಂಡೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ಆಚೆ ಬರಲಾಗದೆ ನರಳಾಡಿದ್ದಾನೆ. ನಂತರ ಸ್ಥಳೀಯರು ಆತನನ್ನು ಸೂಕ್ಷ್ಮವಾಗಿ ಗಮನಿಸಿ ಹಂಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದ ಹಂಪಿ ಪೊಲೀಸರು ಅಗ್ನಿಶಾಮಕದಳ ಸಿಬ್ಬಂದಿ, ಎಸ್ಐಎಸ್ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿ ನೆರವಿನೊಂದಿಗೆ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯಕ್ಕೆ ಪ್ರಾಣಪಾಯದಿಂದ ಪಾರಾಗಿರುವ ಆ ವ್ಯಕ್ತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.