ಬಳ್ಳಾರಿ : ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆಸಿರುವ ಹಲ್ಲೆಯನ್ನು ವಿರೋಧಿಸುತ್ತೇವೆ. ವೈದ್ಯ ವೃತ್ತಿಯ ಉಳಿವಿಗಾಗಿ ಹಾಗು ಒಬ್ಬ ವೈದ್ಯ ನಿರ್ಭಯವಾಗಿ ರೋಗಿಗೆ ಚಿಕಿತ್ಸೆ ನೀಡುವಂತಹ ವಾತಾವರಣವನ್ನು ನಿರ್ಮಿಸಿಕೊಡುವಂತೆ ಭಾರತೀಯ ವೈದ್ಯಕೀಯ ಸಂಘದ ಕಾನೂನು ವಿಭಾಗದ ಮುಖ್ಯಸ್ಥ ಡಾ.ಯೋಗಾನಂದ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ನಗರದ ಐಎಂಎ ಸಂಘದ ಕಚೇರಿಯ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ನಶಿಸಿ ಹೋಗುತ್ತಿದ್ದು, ವೈದ್ಯರೆಲ್ಲಾ ವಿದೇಶದತ್ತ ಮುಖ ಮಾಡುತ್ತಿದ್ದಾರೆ. ವೈದ್ಯರ ಹಾಗೂ ರೋಗಿಗಳ ನಡುವೆ ಸಣ್ಣಪುಟ್ಟ ವಿಚಾರಗಳ ಕುರಿತು ವೈಮನಸ್ಸು ಇರಬಹುದು. ನಾವು ಮತ್ತು ರೋಗಿಗಳು ಕುಳಿತುಕೊಂಡು ಬಗೆಹರಿಸಿಕೊಳ್ಳುತ್ತೀವಿ. ಅದು ಬಿಟ್ಟು ಈ ರೀತಿಯ ದುಂಡಾವರ್ತನೆ ಸಲ್ಲದು. ಕೂಡಲೇ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಳಿಕ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಮಾತನಾಡಿ, ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕರವೇ ಕಾರ್ಯಕರ್ತರು ನಡೆಸಿರುವ ಹಲ್ಲೆ ಪ್ರಕರಣ ಗಂಭೀರವಾಗಿ ಪರಗಣಿಸಿ ತಪ್ಪಿತಸ್ಥ ಕರವೇ ಕಾರ್ಯಕರ್ತರಿಗೆ ಶಿಕ್ಷೆ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಬೆಂಗಳೂರು ವೈದ್ಯ ವಿದ್ಯಾಲಯದ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ನೀಡಿದ್ದೇವೆ. ಮಿಂಟೋ ಕಣ್ಣಾಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ವೈದ್ಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ವೈದ್ಯರು ವೈದ್ಯ ವೃತ್ತಿ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ವೈದ್ಯರಾದ ಡಾ.ಅರುಣ ಕಾಮಿನೇನಿ, ಡಾ.ಸಾಗರ, ಡಾ.ನಿವೇದಿತಾ, ಡಾ.ಶ್ರೀನಿವಾಸ್, ಡಾ.ವಿಜಯ್ ಕುಮಾರ್ ಹೆಸರೂರ, ಡಾ.ಮಧು ಸೂಧನ್, ಡಾ.ಗೋವರ್ಧನ ರೆಡ್ಡಿ ಇದ್ದರು.