ಬಳ್ಳಾರಿ: ಕೇವಲ ಸಬ್ಸಿಡಿ ಆಸೆಗಾಗಿ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ಪಡೆಯೋದು ಬೇಡ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಫಲಾನುಭವಿಗಳಿಗೆ ತಾಕೀತು ಮಾಡಿದ್ದಾರೆ.
ಬಳ್ಳಾರಿ ನಗರದ ಗ್ರಾಮೀಣ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳಾ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಡಿ ಪಡೆದುಕೊಳ್ಳುವ ಸಾಲ ಸೌಲಭ್ಯವನ್ನು ತಾವೆಲ್ಲರೂ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಅಭ್ಯುದಯ ಸಾಧಿಸಬೇಕು. ಈ ಸಮಾಜದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಸ್ವಭಾವ ದೂರವಾಗಬೇಕಿದೆ. ಈ ನಿಟ್ಟಿನಲ್ಲಿ ಹೆಣ್ಣು ತಲೆ ಎತ್ತಿ ಎಲ್ಲರಂತೆ ಬಾಳಲು ನಿಗಮದಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.
ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳು ತಲುಪ ಬೇಕಾದವರಿಗೆ ತಲುಪುತ್ತಿಲ್ಲ ಎಂಬ ಆರೋಪಗಳಿವೆ. ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಬಹಳಷ್ಟು ಮಹಿಳೆಯರಿಗೆ ಮಾಹಿತಿಯಿಲ್ಲ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಿಗಮದಿಂದ ರಾಜ್ಯಾದ್ಯಂತ ಪ್ರಗತಿ ಪರಿಶೀಲನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಸೌಲಭ್ಯಗಳ ಕುರಿತು ನಿಮಗೆ ಗೊತ್ತಿದ್ದರೆ ಇನ್ನೊಬ್ಬರಿಗೆ ಮಾಹಿತಿ ನೀಡಿ. ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವುದೇ ನನ್ನ ಮೂಲ ಕರ್ತವ್ಯವಾಗಿದ್ದು, ಅದಕ್ಕಾಗಿ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿರುವೆ ಎಂದರು.