ಬಳ್ಳಾರಿ: ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿ ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಕಚೇರಿ ಕಾರ್ಯಾರಂಭ ಮಾಡಿದೆ. ಅತ್ಯಾಧುನಿಕ ಪರಿಕರ ಹಾಗೂ ಹೈಟೆಕ್ ಸ್ಪರ್ಶದ ರೀತಿಯಲ್ಲೇ ಈ ಕಚೇರಿಯೊಂದನ್ನ ಜಿಲ್ಲಾಡಳಿತ ಆರಂಭಿಸಿದೆ.
ಜಿಲ್ಲಾಧಿಕಾರಿಯವರೇ ಜಿಲ್ಲಾ ಖನಿಜ ನಿಧಿಗೆ ಅಧ್ಯಕ್ಷರಾಗಿರೋದರಿಂದ ಆಗಾಗ ಈ ಕಚೇರಿಗೆ ಬಂದು ಇಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಾರೆ. ಈ ಕಚೇರಿಯು ಇ-ಸ್ಪಂದನೆ ಕೇಂದ್ರದ ಎದುರು ಇದೆ. ಡಿಸಿ ಕಚೇರಿಯ ಕೆಳಭಾಗದಲ್ಲಿ ಇವುಗಳೆರಡೂ ಇವೆ. ಅಂದರೆ, ಮತ್ತೊಂದು ಕೊಠಡಿಯನ್ನು ಡಿಎಂಎಫ್ ಮೇಲಾಧಿಕಾರಿಗಳ ಕಚೇರಿಯನ್ನಾಗಿ ಮಾಡಲಾಗಿದೆ. ಫರ್ನೀಚರ್ ಸೇರಿದಂತೆ ಇತ್ಯಾದಿ ಪರಿಕರಗಳ ಜೋಡಣೆ ಕಾರ್ಯ ನಡೆದಿದೆ. ಅತೀ ಶೀಘ್ರದಲ್ಲೇ ಈ ಕಚೇರಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ಅಂದಾಜು 1,475 ಕೋಟಿ ರೂ.ಗಳ ಹಣವು ಗಣಿ ಮಾಲೀಕರಿಂದ ಸಂಗ್ರಹವಾಗಿದೆ. ಆ ಪೈಕಿ 194 ಕೋಟಿಯಷ್ಟು ಕ್ರಿಯಾ ಯೋಜನೆ ತಯಾರಿಸಲಾಗಿದ್ದು, 130 ಕೋಟಿಯಷ್ಟು ಹಣವನ್ನು ವಿಶೇಷ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯ ಸಂಡೂರು, ಹೊಸಪೇಟೆ ಹಾಗೂ ಬಳ್ಳಾರಿ ತಾಲೂಕುಗಳಿಗೆ ಈ ಅನುದಾನ ಬಳಕೆಗೆ ಆದ್ಯತೆ ನೀಡಿ, ಉಳಿದ ತಾಲೂಕುಗಳಿಗೆ ಎರಡನೇಯ ಆದ್ಯತೆ ನೀಡಲಾಗುವುದು. ಹೊಸಪೇಟೆ ನಗರದಲ್ಲಿ ನೂರು ಹಾಸಿಗೆ ಆಸ್ಪತ್ರೆ ಹಾಗೂ ಸಂಡೂರು ತಾಲೂಕಾಸ್ಪತ್ರೆಯನ್ನು ಮೇಲ್ದರ್ಜೇಗೇರಿಸಲು ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ. ಸಂಡೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕೌಶಲ ತರಬೇತಿ ಕೇಂದ್ರಗಳನ್ನ ಶುರು ಮಾಡಲಾಗಿದೆ.
ಸಂಡೂರಿನ ಸ್ವಯಂ ಶಕ್ತಿ ಯೋಜನೆಯಡಿ ಮಹಿಳೆಯರು ಮತ್ತು ಪುರುಷರಿಗೆ ಟೈಲರಿಂಗ್ ಮತ್ತು ಡೇಟಾ ಆಪರೇಟಿಂಗ್, ಎಲೆಕ್ಟ್ರಿಷಿಯನ್ ಸೇರಿದಂತೆ ಇತ್ಯಾದಿ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಎಲ್ಲರಿಗೂ ಅಗತ್ಯ ಪರಿಕರಗಳ ಜೊತೆಜೊತೆಗೆ ಸರ್ಟಿಫಿಕೇಟ್ ಅನ್ನು ವಿತರಿಸಲಾಗುವುದು ಡಿಸಿ ಮಾಹಿತಿ ನೀಡಿದರು.