ಬಳ್ಳಾರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಪಾಕ್ಷಿಕ ಪತ್ರಿಕೆಯೊಂದರ ಸಂಪಾದಕ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಆತನ ಬೆಂಬಲಿಗರು ಅಕ್ರಮ ಪ್ರವೇಶ ಮಾಡಿದ ಆರೋಪದಡಿ ಎಫ್ ಐಆರ್ ದಾಖಲಿಸಬೇಕೆಂದು ಜಿಲ್ಲಾ ವರದಿಗಾರರ ಒಕ್ಕೂಟವು ಆಗ್ರಹಿಸಿದೆ.
ಆರ್ಟಿಐ ಅಡಿಯಲ್ಲಿ ಮಾಹಿತಿ ಕೇಳುವ ನೆಪದಲ್ಲಿ ಪತ್ರಿಕೆಯ ಸಂಪಾದಕ ಮತ್ತು ಅವರ ಬೆಂಬಲಿಗರು ಗೌಪ್ಯವಾಗಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಲ್ಲಿ ಹರಿಬಿಟ್ಟು ವ್ಯಯಕ್ತಿಕ ತೇಜೋವಧೆ ಮಾಡಿದ್ದಲ್ಲದೆ ಪತ್ರಿಕೆಯಲ್ಲಿ ಏಕವಚನದಲ್ಲಿ ಸುದ್ದಿಯನ್ನು ಬಿತ್ತರಿಸಿ ಬೆದರಿಸುವ ತಂತ್ರ ಮಾಡಿದ್ದಾರೆ ಎಂದು ಜಿಲ್ಲಾ ವೃತ್ತಿನಿರತ ಪತ್ರಕರ್ತರ ಸಂಘ ಆರೋಪಿಸಿದೆ.
ಅಲ್ಲದೆ ಈ ಹಿಂದೆ ಬಳ್ಳಾರಿಯಲ್ಲಿ ಕಾರ್ಯನಿರತ ಹಿರಿಯ ಪತ್ರಕರ್ತರ ಬಗ್ಗೆ ಸಹ ಸಾಕಷ್ಟು ಅವಹೇಳನಕಾರಿಯಾಗಿ ಸುದ್ದಿಗಳನ್ನು ಬಿತ್ತರಿಸಿ, ತೇಜೋವಧೆ ಮಾಡಲು ಯತ್ನಿಸಿದ್ದರು. ಪತ್ರಕರ್ತರಿಗೆ ಭಯದ ವಾತಾವರಣ ಸೃಷ್ಟಿಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ವಾರ್ತಾ ಇಲಾಖೆಯಿಂದ ಕಾರ್ಯನಿರತ ಪತ್ರಕರ್ತರಿಗೆ ನೀಡಲಾಗುವ ಮಾನ್ಯತಾ ಕಾರ್ಡ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಕೂಡಾ ಮಾಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಮನಗಂಡು ವಾರ್ತಾಧಿಕಾರಿಗಳು ನೀಡಿರುವ ದೂರನ್ನು ಪರಿಶೀಲಿಸಿ, ಕೂಡಲೇ ಸಂಪಾದಕ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಕೆ. ಎಂ. ಮಂಜುನಾಥ, ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ವೆಂಕೋಬಿ ಸಂಗನಕಲ್ಲು ಅವರ ನೇತೃತ್ವದ ನಿಯೋಗ ಎಸ್ಪಿ ಸಿ. ಕೆ. ಬಾಬಾ ಅವರಿಗೆ ಮನವಿ ಸಲ್ಲಿಸಿದ್ದಾರೆ.