ಬಳ್ಳಾರಿ : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಪುನಃ ಹೆಚ್ಚುತ್ತಿರುವ ಹಿನ್ನೆಲೆ ಅಗತ್ಯ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಸಾರ್ವಜನಿಕರು ಸಹಾಯವಾಣಿ ದೂ.ಸಂ:08392-277100 ಮತ್ತು ಮೊ: 8277888866ಗೆ ಸಂಪರ್ಕಿಸಿ ಕೋವಿಡ್ ಸಂಬಂಧಿಸಿದಂತೆ ತಮ್ಮ ಕುಂದು - ಕೊರತೆ ಮತ್ತು ಸಮಸ್ಯೆಗಳನ್ನು ದೂರವಾಣಿ ಮೂಲಕ ಅಥವಾ ಫೋಟೊ ಮತ್ತು ವಿಡಿಯೋಗಳನ್ನು ವ್ಯಾಟ್ಸ್ಆ್ಯಪ್ ಸಂದೇಶಗಳ ಮೂಲಕ ಕಳುಹಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಡಿಸಿ ತಿಳಿಸಿದ್ದಾರೆ.
ಸಹಾಯವಾಣಿ ಕೇಂದ್ರವು ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಕೋವಿಡ್ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯವಹಿಸದೇ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, 6 ಅಡಿಗಳ ಸಾಮಾಜಿಕ ಅಂತರ ಕಾಪಾಡುವುದು, ಕೈಗಳನ್ನು ಸಾಬೂನು ಮತ್ತು ನೀರಿನಿಂದ ಅಥವಾ ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸುವುದನ್ನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸಬೇಡಿ ಎಂದು ಡಿಸಿ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ಮಾಲಪಾಟಿ, ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರವಿರಲಿ. ಮುಂಜಾಗೃತೆ ವಹಿಸಿ ಮುನ್ನಡೆಯಿರಿ ಎಂದು ಸಲಹೆ ನೀಡಿದ್ದಾರೆ.