ಬಳ್ಳಾರಿ : ಪಾರದರ್ಶಕವಾಗಿ ಜಿ+2 ಮಾದರಿಯ ಆಶ್ರಯ ಯೋಜನೆಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವ ಉದ್ದೇಶದಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಹೇಳಿದರು.
ಮುಂಡ್ರಗಿ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ಯೋಜನೆಯ ಜಿ+2 ಮಾದರಿಯ ವಸತಿ ಸೌಲಭ್ಯದಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ಗುರುತಿಸಿ ಸಂಖ್ಯೆ ನೀಡುವ ಕಾರ್ಯಕ್ರಮಕ್ಕೆ ತುಷಾರಮಣಿ ಚಾಲನೆ ನೀಡಿದರು. ಬಿಡಿಎಎ ಫುಟ್ಬಾಲ್ ಮೈದಾನ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ, ವಸತಿ ಇಲಾಖೆ ಹಾಗೂ ಕೃಷ್ಣ ಗ್ರಾಮೀಣ ಬ್ಯಾಂಕ್ ಈ ಕಾರ್ಯಕ್ರಮ ಆಯೋಜಿಸಿದ್ದವು.
ಆಶ್ರಯ ಯೋಜನೆಯ ಕಾರ್ಯ ಸುಗಮಗೊಳಿಸಲು. ಫಲಾನುಭವಿಗಳಲ್ಲಿ ಯೋಜನೆ ಕುರಿತು ಮಾಹಿತಿ ಹಾಗೂ ಗೊಂದಲ ನಿವಾರಿಸಲು ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಕಚೇರಿ ತೆರೆಯಲಾಗಿದೆ. ಫಲಾನುಭವಿಗಳಿಗೆ ವಂತಿಕೆ ಹಣ ಪಾವತಿಸುವ ಕುರಿತು ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದ್ದು, ನೋಟಿಸ್ ತಲುಪದ ಫಲಾನುಭವಿಗಳು ಕಚೇರಿಗೆ ಬೇಟಿ ನೀಡಿ ನೋಟಿಸ್ ಪಡೆದುಕೊಳ್ಳಬಹುದಾಗಿದೆ ಎಂದರು.
ಮುಂಡ್ರಗಿ ಆಶ್ರಯ ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೆ ಒಟ್ಟು 6 ಲಕ್ಷ ರೂ.ಗೂ ಅಧಿಕ ವೆಚ್ಚವಾಗಲಿದೆ. ಪರಿಶಿಷ್ಟ ವರ್ಗದವರಿಗೆ ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದ 1.8 ಲಕ್ಷ ರೂ. ಹಾಗೂ ಕೇಂದ್ರದ ಹೆಚ್ಎಫ್ಎ ವತಿಯಿಂದ 1.5 ಲಕ್ಷ ರೂ. ಹೆಚ್ಚುವರಿ ಸಹಾಯ ಧನ ನೀಡಲಾಗುತ್ತದೆ. ಬ್ಯಾಂಕ್‌ನಿಂದ 1.45 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದ್ದು, ಫಲಾನುಭವಿಗಳು ಮುಂಗಡ ವಂತಿಕೆ ಸೇರಿ 1,27,300 ರೂ. ಪಾವತಿಸಬೇಕು ಎಂದರು.
ಇತರೆ ವರ್ಗದವರಿಗೆ ವಾಜಪೇಯಿ ನಗರ ವಸತಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ಹಾಗೂ ಕೇಂದ್ರದ ಹೆಚ್ಎಫ್ಎ ವತಿಯಿಂದ ರೂ 1.50 ಲಕ್ಷ ರೂ. ಹೆಚ್ಚುವರಿ ಸಹಾಯ ಧನ ನೀಡಲಾಗುತ್ತದೆ. ಬ್ಯಾಂಕ್‌ನಿಂದ 1.45 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ. ಫಲಾನುಭವಿಗಳು ಮುಂಗಡ ವಂತಿಕೆಯಾಗಿ 1,87,300 ರೂ ಪಾವತಿಸಬೇಕು ಎಂದು ಅವರು ವಿವರಿಸಿದರು.