ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿದ್ದ 4 ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡವು ದಾಳಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
ಸಾಗುವಳಿ ಮಾಡುತ್ತಿದ್ದ ರೈತನ ಮೇಲೆ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಳಮುರವಣಿ ಸೀಮೆಯ ಸರ್ವೆ ನಂ-37/ಬಿ/2ರ ಮಾಲೀಕರಾದ ಕಾಳಪ್ಪ ದೊಡ್ಡ ಈರಣ್ಣ ಅವರು ಸಾಗುವಳಿ ಮಾಡುತ್ತಿರುವ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಒಟ್ಟು 31.700 ಕಿ.ಗ್ರಾಂ (54 ಗಿಡಗಳು) ಎಂದು ತಿಳಿದುಬಂದಿದೆ.
ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ, ಬಳ್ಳಾರಿ ಅಬಕಾರಿ ಉಪಾಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಉಪಾಧೀಕ್ಷಕ ಬಿ.ಹೆಚ್. ಪೂಜಾರ್ ನೇತೃತ್ವದಲ್ಲಿ ಸಿರುಗುಪ್ಪ ತಹಶೀಲ್ದಾರ್ ಸಾಯಿಬಣ್ಣ ಕೂಡಲಗಿ, ಕಂದಾಯ ಇಲಾಖೆ ಸಿಬ್ಬಂದಿ, ಅಬಕಾರಿ ನಿರೀಕ್ಷಕರಾದ ಬಿ.ಆಂಜನೇಯ, ಪ್ರಹ್ಲಾದ ಆಚಾರ್, ಅಬಕಾರಿ ಉಪ ನಿರೀಕ್ಷಕರರಾದ ಶಂಕರ ಗುಡದಾರ್, ಅಬಕಾರಿ ಇಲಾಖೆ ಸಿಬ್ಬಂದಿ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದೆ. ಸಿರುಗುಪ್ಪ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.