ಬಳ್ಳಾರಿ : ಜಮೀನಿಗೆ ತುಂಗಭದ್ರ ನದಿಯಿಂದ ನೀರಿನ ಸಂಪರ್ಕ ಪಡೆಯುವ ಸಲುವಾಗಿ ಹೂವಿನ ಹಡಗಲಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿ ಅಧೀಕ್ಷಕ 7 ಸಾವಿರ ಲಂಚದ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಅಂಗೂರು ಗ್ರಾಮದ ಪುರುಷೋತ್ತಮ ರೆಡ್ಡಿ ಅವರ ಸರ್ವೇ ನಂಬರ್ 68/ಬಿ ಮತ್ತು 69/ಎ ರಲ್ಲಿ ಸುಮಾರು 5 ಎಕರೆ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡಿಕೊಂಡಿದ್ದರು.
2018ರಲ್ಲಿ ಸದರಿ ಜಮೀನಿಗೆ ತುಂಗಭದ್ರ ನದಿಯಿಂದ ನೀರಿನ ಸಂಪರ್ಕ ಪಡೆಯುವ ಸಲುವಾಗಿ ಹೂವಿನ ಹಡಗಲಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿಗೆ ಅರ್ಜಿಯನ್ನು ಜಮೀನಿನ ಮಾಲೀಕರು ಕೊಟ್ಟಿದ್ದು, ಸದರಿ ಕೆಲಸಕ್ಕಾಗಿ ಪಿರ್ಯಾದುದಾರರು ನಾಲ್ಕು ತಿಂಗಳಿಂದ ಜಮೀನಿಗೆ ನೀರಿಗಾಗಿ ಕಚೇರಿಗೆ ಸಾಕಷ್ಟು ಬಾರಿ ಅಲೆದಾಟ ಮಾಡಿದ್ದರು.
ಬೇಗ ಕೆಲಸ ಮಾಡಲು ಕೇಳಿದಾಗ ಕಚೇರಿಯ ಅಧೀಕ್ಷಕ ಪ್ರಭು ಆನಂದ್ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಪಿರ್ಯಾದುದಾರರು ಡಿಸೆಂಬರ್ 7, 2020 ರಂದು ಕಚೇರಿಯಲ್ಲಿ 280 ರೂ. ರಸೀದಿ ಪಡೆದು ನಂತರ ಪ್ರಭು ಆನಂದ್ ಅವರು ಭೇಟಿಯಾದಾಗ ₹7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆರಂಭದಲ್ಲಿ ₹2 ಸಾವಿರ ನೀಡಿದ ಅವರು, ಉಳಿದ 5 ಸಾವಿರ ರೂಪಾಯಿ ಹಣ ನೀಡುವುದಾಗಿ ತಿಳಿಸಿದ್ದರು. ಸ್ಥಳದಲ್ಲಿ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದು, ಪ್ರಕರಣ ದಾಖಲಿಸಿದ್ದಾರೆ.