ಬಳ್ಳಾರಿ: ಜಿಲ್ಲೆಯ ಸಿರಗುಪ್ಪಿ ನಗರದ ಡ್ರೈವರ್ ಕಲೋನಿಗೆ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಕಾಲೋನಿಯ ನಿವಾಸಿಗಳು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಕಾಲೋನಿಗೆ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಏಪ್ರಿಲ್ 23 ರಂದು ನಡೆಯುವ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಕಾಲೋನಿಯ ನಿವಾಸಿಗಳು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. 16ನೇ ವಾರ್ಡಿಗೆ ಒಳಪಡುವ ಕಾಲೋನಿಯ ಜನರು ಹಲವಾರು ವರ್ಷಗಳಿಂದ ಮೂಲಸೌಕರ್ಯದಿಂದ ವಂಚಿತರಾಗಿದ್ದು, ಸುಸಜ್ಜಿತ ರಸ್ತೆ, ಒಳ ಚರಂಡಿ ಸೇರಿ ಅಗತ್ಯ ಸೌಲಭ್ಯಗಳನ್ನ ಕಲ್ಪಿಸಿಲ್ಲ ಅಂತಾ ಆರೋಪಿಸಿದರು.
ನಮಗೇನು ಅತ್ಯಾಧುನಿಕ ಸೌಲಭ್ಯ ಬೇಕು ಎಂದು ಜನಪ್ರತಿನಿಧಿಗಳ ಹತ್ತಿರ ಭಿಕ್ಷೆ ಬೇಡುತ್ತಿಲ್ಲ, ಅಗತ್ಯ ಸೌಲಭ್ಯ ನೀಡಿ ಎನ್ನುತ್ತಿದ್ದೇವೆ, ಕೇವಲ ಚುನಾವಣೆ ಬಂದಾಗ ಮಾತ್ರ ವೋಟ್ ಕೇಳೋಕೆ ಮಾತ್ರ ಜನ ಪ್ರತಿನಿಧಿಗಳು ಬರುತ್ತಾರೆ. ಆ ಮೇಲೆ ತಿರುಗಿ ನೋಡಿದ್ರೇ ತಿಮ್ಮಪ್ಪನ ಆಣೆ. ಆದರೆ, ಮತ್ತೆ ಚುನಾವಣೆ ಬಂದಾಗ ಮಾತ್ರ ಮುಖ ತೋರಿಸುತ್ತಾರೆ ಅಂತಾ ದೂರಿದ್ದಾರೆ.
ಸುಸಜ್ಜಿತ ರಸ್ತೆಯಿಲ್ಲದೆ, ಕಾಲೋನಿಯ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಸಮಯಾನುಸಾರ ಆಸ್ಪತ್ರೆಗೆ ಕರೆದೊಯ್ಯುಲು ಕಷ್ಟಸಾಧ್ಯ. ಇಂತಹ ಸಾಕಷ್ಟು ತೊಂದರೆಗೊಳಗಾದ ಉದಾಹರಣೆಗಳಿವೆ. ಈಗಲೂ ಕೂಡ ಮಳೆ ಸುರಿದರೆ ದ್ವಿಚಕ್ರವಾಹನಗಳು ಸಂಚರಿಸೋದು ಕಷ್ಟ. ಒಂದರ್ಥದಲ್ಲಿ ಕೆಸರು ಗದ್ದೆಯಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ನಾವೆಲ್ಲ ಜೀವಿಸುತ್ತಿದ್ದೇವೆ.
ಈ ಬೇಡಿಕೆ ಈಡೇರುವವರೆಗೂ ನಾವೆಲ್ಲ ಮತ ಚಲಾಯಿಸೋದಿಲ್ಲ. ಅಲ್ಲದೇ, ಈ ಬಾರಿಯ ಲೋಕಸಭಾ ಚುನಾವಣಾ ನಿಮಿತ್ತ ನಡೆಯುವ ಮತದಾನ ಪ್ರಕ್ರಿಯೆಯನ್ನ ಬಹಿಷ್ಕರಿಸಲು ತಾವೆಲ್ಲ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ಡ್ರೈವರ್ ಕಾಲೋನಿಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.