ಬಳ್ಳಾರಿ: ನಗರ ಹೊರವಲಯದ ಹೆಚ್‌ಎಲ್‌ಸಿ ಉಪಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಮೃತದೇಹ ನೆರೆಯ ಆಂಧ್ರ ಪ್ರದೇಶದಲ್ಲಿ ಪತ್ತೆಯಾಗಿದೆ. ರಾಯದುರ್ಗ ತಾಲೂಕಿನ ಬೊಮ್ಮನಾಳು ಮಂಡಲದ ಉತ್ತಂಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಗಿರಿ ಉಪಕಾಲುವೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಮೃತದೇಹವನ್ನು ನೀರಿನಿಂದ ಹೊರೆ ತೆಗೆದಿದ್ದಾರೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕಲ್ಲೂರು ಮಂಡಲದ ಪೆದ್ದಪಾಡು ಗ್ರಾಮದ ನಿವಾಸಿ ಜಗನ್ ಎಂಬುವರ ಪುತ್ರ ಪ್ರವೀಣ್ ಕುಮಾರ (28) ಎಂಬಾತ ಮೃತ ವ್ಯಕ್ತಿ.
ಭಾನುವಾರ ಸಂಜೆ ಹೊತ್ತಿಗೆ ಪ್ರವೀಣಕುಮಾರ ಹೆಚ್‌ಎಲ್‌ಸಿ ಉಪಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮಾಹಿತಿ ಸಿಕ್ಕಿತ್ತು. ಸೋಮ ವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ ಸುದರ್ಶನ ಮತ್ತು ರಫೀಕ್ ತಂಡ ಮಂಗಳವಾರ ಬೆಳಗ್ಗಿನ ಜಾವದವರೆಗೂ ಶೋಧ ಕಾರ್ಯ ನಡೆಸಿದ್ದರು.
ಮದ್ಯದ ಅಮಲಲ್ಲಿ ನೀರು ಪಾಲಾದ ಯುವಕ?
ಕಳೆದ ಭಾನುವಾರದಂದು ಆಂಧ್ರದ ನೆಲೆಸಿದ್ದ ನಂದಕೃಷ್ಣ ಅವರನ್ನು ಬಳ್ಳಾರಿಗೆ ಕರೆಯಿಸಿ, ಜಿಲ್ಲೆಯ ಕೊಳಗಲ್ಲು ರಸ್ತೆಯ ಬಳಿಯಿರುವ ಹೆಚ್‌ಎಲ್‌ಸಿ ಉಪಕಾಲುವೆ ಪಕ್ಕದಲ್ಲೇ ಪ್ರವೀಣ್ ಕುಮಾರ ಸೇರಿದಂತೆ ಇತರೆ ನಾಲ್ವರು ಮದ್ಯ ಸೇವನೆ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಪ್ರವೀಣ ಹಾಗೂ ಆತನ ಸ್ನೇಹಿತ ತಮಾಷೆ ಮಾಡಿಕೊಳ್ಳುತ್ತಾ ಉಪಕಾಲುವೆಯ ನೀರಿಗೆ ಧುಮುಕಿದ್ದಾರೆ ಎಂಬ ಮಾಹಿತಿ ಇದೆ. ಈ ವೇಳೆ ಉಳಿದ ಒಬ್ಬನನ್ನು ಸ್ನೇಹಿತನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಈಜು ಬಾರದ ಪ್ರವೀಣ್ ಕುಮಾರ ಉಪಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ.
ಘಟನೆಯಲ್ಲಿ ಮೃತಪಟ್ಟ ಪ್ರವೀಣಕುಮಾರ ಬಳ್ಳಾರಿಯ ಆಶಾ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯೇನ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳ ಹಿಂದಷ್ಟೇ ಇವರಿಗೆ ವಿವಾಹವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೃಹ ರಕ್ಷಕ ದಳದ ಮುಖ್ಯಸ್ಥರಾದ ಹೆಚ್.ತಿಪ್ಪೇಸ್ವಾಮಿ, ಟಿ.ಎಲ್.ಸಿ ಬಸವಲಿಂಗ, ಸುದರ್ಶನ ಹಾಗೂ ರಫೀಕ್ ನೇತೃತ್ವದ ತಂಡವು ಸತತ 24 ಗಂಟೆಗಳ ಕಾಲ ಹೆಚ್‌ಎಲ್‌ಸಿ ಉಪಕಾಲುವೆಯಲ್ಲಿ ಕಾರ್ಯಾಚರಣೆ ನಡೆಸಿದೆ.