ಬಳ್ಳಾರಿ : ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಗಳನ್ನು ಅನುಷ್ಠಾನ ಮಾಡುವುದಕ್ಕೆ ಸಂಬಂಧಿಸಿದಂತೆ ಉಪಸಮಿತಿ ಸಭೆ ನಡೆಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ನಗರ ಸಾರಿಗೆ ವಾಹನಗಳ ಬಸ್ ನಿಲ್ದಾಣ ಹಾಗೂ ಬಸ್ ಶೆಲ್ಟರ್ಗಳ ನಿಲುಗಡೆ/ನಿಲುಗಡೇತರ ಸ್ಥಳ, ನಿರ್ಧಿಷ್ಠ ಸ್ಥಳಗಳಲ್ಲಿ ಆಟೋ ರಿಕ್ಷಾ ನಿಲುಗಡೆಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಕೂಡಲೇ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಹಾನಗರ ಪಾಲಿಕೆ/ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಹೊಸ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ವಿವರವಾಗಿ ಚರ್ಚಿಸಿ ಸಲ್ಲಿಸುವಂತೆ ಸೂಚಿಸಿದರು.
ಸಂಡೂರು ಭಾಗದಲ್ಲಿ ಓವರ್ ಸ್ಪೀಡ್‍ನಿಂದಾಗಿ ಅನೇಕ ಅಪಘಾತಗಳಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸ್ ಮತ್ತು ಆರ್ಟಿಒ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಳ್ಳಿ ಎಂದರು. ಹೆಲ್ಮೆಟ್ ರಹಿತ ಬೈಕ್ ಚಾಲನೆ ತುಂಬಾ ಅಪಾಯಕಾರಿ ಹಾಗೂ ಇದರಿಂದ ಅನೇಕ ಅಪಘಾತಗಳಾಗುತ್ತಿದೆ, ಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯಗೊಳಿಸಿ ಮತ್ತು ಉಲ್ಲಂಘಿಸಿದವರಿಗೆ ನಿಯಮಾನುಸಾರ ಕ್ರಮಕೈಗೊಳ್ಳಿ ಎಂದರು.
ಓದಿ : ಸಿದ್ದರಾಮಯ್ಯ ಅವರನ್ನ ಮಾಜಿ ಅನ್ನಲ್ಲ, ಭಾವಿ ಸಿಎಂ ಅಂತೀನಿ: ಜಮೀರ್ ಅಹಮ್ಮದ್
ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ 8.33ಲಕ್ಷ ರೂ.ಅನುದಾನ ಲಭ್ಯವಿದ್ದು, ಸುರಕ್ಷತೆಗೆ ಸಂಬಂಧಿಸಿದಂತೆ ಅನುದಾನ ಅಗತ್ಯವಿದ್ದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ ಡಿಸಿ ಮಾಲಪಾಟಿ ಅವರು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಅನಧಿಕೃತವಾಗಿ ಸಾಗಿಸುವುದನ್ನು ನಿಯಂತ್ರಿಸಲು ಹಾಗೂ ಸಾರಿಗೇತರ ವಾಹನಗಳಲ್ಲಿ ಬಾಡಿಗೆ ಪಡೆದು ಪ್ರಯಾಣಿಕರನ್ನು ಕೊಂಡೊಯ್ಯುತ್ತಿರುವ ಪ್ರಕರಣಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.