ಬಳ್ಳಾರಿ : ಪರವಾನಗಿ ಪಡೆಯದೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಭವನಗಳಿಗೆ ಕೂಡಲೇ ನೀರು, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಹೇಳಿದರು.
ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಸುಮಾರು 50 ಸಮುದಾಯ ಭವನಗಳು ಪರವಾನಗಿ ಇಲ್ಲದೇ ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇದರಿಂದಾಗಿ ಮಹಾನಗರ ಪಾಲಿಕೆಗೆ ತೆರಿಗೆ ವಿಷಯದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು. ಜೊತೆಗೆ ಆ ಸಮುದಾಯ ಭವನಗಳಿಗೆ ನೀರು, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯಗಳಿಗೆ ಕಡಿವಾಣ ಹಾಕಿದ್ದು, ಪರವಾನಗಿ ಪಡೆದ ನಂತರ ಸೌಲಭ್ಯ ಒದಗಿಸುವುದಾಗಿ ಹೇಳಿದರು.
ಜೊತೆಗೆ ಕುಡಿವ ನೀರು, ಒಳ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಹಾಗೂ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗಳು ತ್ವರಿತಗತಿಯಲ್ಲಿ , ನಿಗದಿಪಡಿಸಿದ ಅವಧಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸಗಳನ್ನು ಮಾಡಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದರು.
ಇನ್ನು, 1996ರ ಕಾಯ್ದೆಯ ಪ್ರಕಾರ ನಗರದಲ್ಲಿ ಇರುವ ಅಂಗಡಿ, ಮುಂಗಟ್ಟುಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆಯಿರಿ . ಇಲ್ಲವಾದಲ್ಲಿ, ಬಾಗಿಲು ಮುಚ್ಚಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಅಷ್ಟೇ ಅಲ್ಲದೆ, ಪಾಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದ್ದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಆದಷ್ಟು ಬೇಗ ತೆರಿಗೆ ಭರಿಸಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರು ಇದೇ ಸಂದರ್ಭದಲ್ಲಿ ವಿವಿಧ ರೀತಿಯ ದೂರುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಇಂಜಿನಿಯರ್ಗಳು ಸೇರಿದಂತೆ ವಿವಿಧ ಶಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.