ಬಳ್ಳಾರಿ: ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲಿ ಅಂದಾಜು 5-6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಆ ಪೈಕಿ ಶೇ. 10- 15ರಷ್ಟು ಪ್ರಮಾಣದ ಬೆಳೆಯು ರೋಗಬಾಧೆಯಿಂದ ನಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆಯು ಅಂದಾಜಿಸಿದೆ.
ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಸಂಡೂರು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಸತತ ಸುರಿದ ಮಳೆಯಿಂದ ಪ್ರಮುಖವಾಗಿ ಫರ್ಪಲ್ ಗ್ಲಾಚು, ಜಿಬ್ಬು ರೋಗ, ಸ್ಟೇಮೋ ಫಿಲೀಮಾ (ಹಂಗಮಾರಿ) ರೋಗಕ್ಕೆ ತುತ್ತಾಗಿ ಸಾಕಷ್ಟು ಬೆಳೆ ನಷ್ಟ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈರುಳ್ಳಿ ಬೆಳೆಯೋ ಜಾಗದಲ್ಲೇ ಮಳೆ ನೀರು ಸಂಗ್ರಹಗೊಂಡ ಪರಿಣಾಮವಾಗಿ ಈರುಳ್ಳಿ ಬೇರುಗಳು ಕೊಳೆತು ಹೋಗುತ್ತಿವೆ. ಇದನ್ನರಿತ ತೋಟಗಾರಿಕೆ ಇಲಾಖೆಯು ಈಗಾಗಲೇ ಹಗರಿ ಕೃಷಿ ವಿಜ್ಞಾನ ಕೇಂದ್ರದ ನುರಿತ ವಿಜ್ಞಾನಿಗಳ ತಂಡದೊಂದಿಗೆ ಆಯಾ ತಾಲೂಕುಗಳಲ್ಲಿನ ಈರುಳ್ಳಿ ಬೆಳೆದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಿಸಿಲಿನ ವಾತಾವರಣ ಇರದ ಕಾರಣ ಈ ರೋಗ ಸಾಮಾನ್ಯವಾಗಿ ಹರಡಿಕೊಂಡಿದೆ. ಬಿಸಿಲು ಬಾರದೇ ಇದೇ ರೀತಿಯಾಗಿ ವಾತಾವರಣ ಮುಂದುವರಿದ್ರೆ ಕನಿಷ್ಠ ವಾರಕ್ಕೊಮ್ಮೆಯಾದ್ರೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ರಾಸಾಯನಿಕ ಔಷಧಿಗಳನ್ನ ಕಡ್ಡಾಯವಾಗಿ ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆ- ಸೂಚನೆಗಳನ್ನ ನೀಡಲಾಗಿದೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಬೋಗಿ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.
ಕಳೆದ ಮಾರ್ಚ್ - ಏಪ್ರಿಲ್ ತಿಂಗಳು ಲಾಕ್ಡೌನ್ ಸಂದರ್ಭದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸೂಕ್ತ ದರ ಲಭ್ಯವಾಗದ ಹಿನ್ನೆಲೆ ಬೆಳೆ ಸಮೀಕ್ಷೆ ಯೋಜನೆಯಡಿ ಈಗಾಗಲೇ ಸರಿಸುಮಾರು 3ರಿಂದ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ ತಲಾ 15,000 ರೂ.ಗಳಂತೆ ಪರಿಹಾರ ಧನ ನೀಡಲಾಗಿದೆ. (ಹೆಕ್ಟೇರ್ ಅಂದರೆ 2.5 ಎಕರೆ). ಒಂದು ವೇಳೆ ಅದರೊಳಗೆ ಕೆಲ ಈರುಳ್ಳಿ ಬೆಳೆಗಾರರನ್ನ ಕೈಬಿಟ್ಟಿದ್ದರೆ ಅವರನ್ನೂ ಕೂಡ ಸೇರಿಸಿ ಪರಿಹಾರ ನೀಡಲಾಗುವುದು ಎಂದು ಎಸ್.ಪಿ.ಬೋಗಿ ತಿಳಿಸಿದ್ದಾರೆ.