ಬಳ್ಳಾರಿ: ಜಿಲ್ಲೆಯ ಭಕ್ತಗಣವು ಶರಣ ಪರಂಪರೆಯಲ್ಲಿ ತೊಟ್ಟಿಲು ಕಾರ್ಯಕ್ರಮ ಆಚರಿಸೋ ಮುಖೇನ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಬಳ್ಳಾರಿ ತಾಲೂಕಿನ ಬೇವಿನಹಳ್ಳಿ ಗ್ರಾಮದ ಕಡೇಮನೆ ವೀರಭದ್ರಗೌಡ ಅವರ ಪುತ್ರಿ ಕೆ.ಲತಾ ಅವರಿಗೆ ಜನಿಸಿದ ಹೆಣ್ಣುಮಗುವಿಗೆ ಶರಣ ಪರಂಪರೆಯಲ್ಲೇ ಲಿಂಗದೀಕ್ಷೆ ಕೊಡಿಸಿ 'ದೀಕ್ಷಾ' ಎಂದು ಹೆಸರಿಟ್ಟಿದ್ದಾರೆ. ಇಲ್ಲಿನ ರಾಷ್ಟ್ರೀಯ ಬಸವದಳದ ಮುಖ್ಯಸ್ಥ ರವಿಶಂಕರ್ ಅವರ ಸಮಕ್ಷಮದಲ್ಲಿ ನಡೆದ ಈ ಕಾರ್ಯಕ್ರಮವು ಬಸವಾದಿ ಶರಣರ ವಚನಗಳ ಪಠಣ, ಲಿಂಗಪೂಜಾ ವಿಧಿ ವಿಧಾನದ ಮಹತ್ವದ ತಿಳಿಸಿಕೊಡುವ ಮೂಲಕ 26 ದಿನಗಳ ಮಗುವಿಗೆ ಲಿಂಗಧಾರಣೆ ಮಾಡಿದ್ದಾರೆ.
ಯಾವುದೇ ವೈದಿಕ ಆಚರಣೆಗೆ ಆಸ್ಪದ ನೀಡದೆ, ಬಸವಾದಿ ಶರಣರ ವಚನಗಳನ್ನು ಪಠಿಸುತ್ತಲೇ ಲಿಂಗಧಾರಣೆ ಸೇರಿದಂತೆ ಲಿಂಗಾಯತ ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮುಖೇನ ಅತ್ಯಂತ ಸರಳವಾಗಿ ಕಾರ್ಯಕ್ರಮವನ್ನು ರಾಷ್ಟ್ರೀಯ ಬಸವ ದಳದ ಪ್ರಮುಖರು ನಡೆಸಿಕೊಟ್ಟರು.
ವೇದ-ಮಂತ್ರ ಘೋಷಗಳು ಇರಲಿಲ್ಲ
ಸಾಮಾನ್ಯವಾಗಿ ಈ ತೊಟ್ಟಿಲು ಕಾರ್ಯಕ್ರಮ ಎಂದರೆ ವೇದ- ಮಂತ್ರ ಘೋಷಗಳು ಮೊಳಗಿರುತ್ತಿದ್ದವು. ಆದರೆ, ಈ ಕಾರ್ಯಕ್ರಮದಲ್ಲಿ ಯಾವುದೇ ವೇದ ಮಂತ್ರ ಘೋಷಗಳಿರಲಿಲ್ಲ. ಕೇವಲ ಬಸವಾದಿ ಶರಣರ ವಚನಗಳೇ ಇಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಇಷ್ಟಲಿಂಗ ಪೂಜೆ ಮಾಡಿದ್ರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತು ಸವಿಸ್ತಾರವಾಗಿ ತಿಳಿಸಿಕೊಡಲಾಯಿತು.