ಬಳ್ಳಾರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಂಡಿಹಟ್ಟಿಯಲ್ಲಿ ಸಂಜೆ ಸಂಭವಿಸಿದೆ. ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ದ್ಯಾವಮ್ಮ ಅವರಿಗೆ ತಗುಲಿದೆ. ಈ ವೇಳೆ ದ್ಯಾವಮ್ಮ ಅವರನ್ನು ರಕ್ಷಿಸಲು ಹೋದ ಅವರ ಪತಿ ಪಂಪಾಪತಿ ಅವರಿಗೂ ವಿದ್ಯುತ್ ಆಘಾತವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿವರ: ಮೃತ ಪಂಪಾಪತಿ ಅವರು ಬಯಲಾಟ ಕಲಾವಿದರಾಗಿದ್ದರು, ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರೂ ಹೌದು. ಬಳ್ಳಾರಿ ಜಿಲ್ಲೆಯಲ್ಲಿ ಬಯಲಾಟ ಕಲಾವಿದರಾಗಿ ಹಲವು ದಶಕಗಳ ಕಾಲ ಸಾರಥಿ ಪಾತ್ರವನ್ನು ಅಭಿನಯಿಸಿದ್ದರಿಂದ ಇವರನ್ನು ಸಾರಥಿ ಪಂಪಾಪತಿ ಎಂದೇ ಜನರು ಗುರುತಿಸುತ್ತಿದ್ದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕೌಲ್‍ಬಜಾರ್ ವೃತ್ತದ ಸಿಪಿಐ ವಾಸುಕುಮಾರ್ ಸ್ಥಳ ಪರಿಶೀಲನೆ ಮಾಡಿ, ಮೃತದೇಹಗಳನ್ನು ವಿಮ್ಸ್ ಶವಾಗಾರಕ್ಕೆ ಕಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಪಂಪಾಪತಿ ಹಾಗೂ ದ್ಯಾವಮ್ಮ ಅವರ ಸಾವಿಗೆ ನಗರದ ಗಣ್ಯರು, ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಕಲಾ ಸೇವೆ: ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿರಿಸಿ ಕೊಂಡು ತಾವಷ್ಟೇ ಪಾತ್ರ ಮಾಡದೇ ಮತ್ತಷ್ಟು ಜನರಿಗೆ ಬಯಲಾಟ ಕಲೆಯನ್ನು ಹೇಳಿಕೊಡುತ್ತಿದ್ದ ಪಂಪಾಪತಿ ಅವರಿಗೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಗೌರವ ನೀಡಿತ್ತು. ತಮ್ಮ ಜೀವನದುದ್ದಕ್ಕೂ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿದ ಪಂಪಾಪತಿ ಅವರು ನೂರಾರು ಹಳ್ಳಿಯ ಯುವಕರಿಗೆ ಬಯಲಾಟದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ರು. ಇತ್ತೀಚೆಗೆ ವಯಸ್ಸಾದ್ರೂ ಕೂಡ ಬಯಲಾಟ ವೇಳೆ ಹೋಗಿ ತರಬೇತಿ ಸಹ ನೀಡುತ್ತಿದ್ದರು. ಅಲ್ಲದೇ ಸಾರಥಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ಪಂಪಾಪತಿಯನ್ನು ಸಾರಥಿ ಪಂಪಾಪತಿಯೆಂದೇ ಕರೆಯುತ್ತಿದ್ದರು.
ಇದನ್ನೂ ಓದಿ: ನೀರಿನ ಹೊಂಡದಲ್ಲಿ ಬಿದ್ದ ಯುವಕನ ರಕ್ಷಣೆಗೆ ಹೋದ ನಾಲ್ವರು ಸಾವು