ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವವನ್ನು ನೆರೆ ಹಾಗೂ ಬರಗಾಲದ ಹಾವಳಿ ಹಿನ್ನೆಲೆ, ಕಳೆದ ವರ್ಷದಂತೆ ಈ ಬಾರಿ ಕೂಡ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲು ಸಿಎಂ ಯಡಿಯೂರಪ್ಪ ಮೌಖಿಕವಾಗಿ ಆದೇಶ ಹೊರಡಿಸಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಹಾವಳಿ ಜತೆಗೆ ಬರದ ಕರಿ ಛಾಯೆಯೂ ಆವರಿಸಿದೆ. ಈ ಹಿನ್ನಲೆಯಲ್ಲಿ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂಬ ಉದ್ದೇಶದಿಂದ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರೂ ಕೂಡ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಎರಡು ದಿನಗಳ ಮಟ್ಟಿಗೆ ಸರಳವಾಗಿಯಾದರೂ ಹಂಪಿ ಉತ್ಸವವನ್ನು ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಹುದ್ದೆಗೆ ಸಂಬಂಧಿಸಿದಂತೆ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಈ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಶಾಸಕ ಸೋಮಶೇಖರರೆಡ್ಡಿ ಸೇರಿ ಹಲವರಿಗೆ ನನ್ನ ಮೇಲೆ ಅಭಿಮಾನ ಇರಬಹುವುದು. ಅವರಿಗೂ ವಾಕ್ ಸ್ವಾತಂತ್ರ್ಯ ಇದೆ. ಹಾಗಂತ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು ಎಂದರು.
ನೆರೆಹಾವಳಿಯಿಂದಾಗಿ ರೈತರು ಮತ್ತು ನೇಕಾರರಿಂದ ಸಾಲಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಕುರಿತು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಾಗುವುದು. ಸಾಲಮನ್ನಾ ವಿಚಾರದಲ್ಲಿ ಗೊಂದಲವಿದೆ. ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೂ ಕ್ಲಾರಿಟಿ ಇರಲಿಲ್ಲ. ಹಾಗಾಗಿ ಈ ಬಗ್ಗೆ ನಾಳೆ ನಾಡಿದ್ದು ಸಿಎಂ ಬಳಿ ಕೂಲಂಕುಷವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪರಿಗೆ ನಿಗಮ ಮಂಡಳಿ ನೀಡಲಾಗಿದೆ. ಅದನ್ನು ಸ್ವೀಕರಿಸುವಂತೆ ಅವರ ಮನವೊಲಿಸಲು ಪ್ರಯತ್ನಿಸಲಾಗುವುದು. ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲುವುದು ಮುಖ್ಯ ಎಂದು ಸ್ಪಷ್ಟಪಡಿಸಿದ್ದಾರೆ.