ಬಳ್ಳಾರಿ: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ನಮಗೆ ಸವಾಲಾಗಿದೆ. ಆದರೂ ಸಹ ನಮ್ಮ ಪಕ್ಷವೇ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿವ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ಹಾಗೂ ವಿವಿ ಸಂಘದ ಕಿಂಡರ್ ಗಾರ್ಡನ್ ಸ್ಕೂಲ್ ನೂತನ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, 'ಅಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು. ಬಳಿಕ ಹೈಕಮಾಂಡ್ಗೆ ಕಳುಹಿಸಲಾಗುತ್ತದೆ' ಎಂದರು.
'ಈ ಚುನಾವಣೆ ಸೆಮಿಫೈನಲ್ ಅಲ್ಲ. ಯಾಕಂದ್ರೆ, ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ನಂತರ ಅಧಿಕಾರ ಕಳೆದುಕೊಂಡರು' ಎಂದರು.
'ಮೇಕೆದಾಟು ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಡ್ಡಿಪಡಿಸಲು ಅಥವಾ ಕಾನೂನು ರಚನೆ ಮಾಡಲು ತಮಿಳುನಾಡಿಗೆ ಹಕ್ಕಿಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯ ಹೂಳು ತೆಗೆಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, 'ಸಮಾನಾಂತರ ಜಲಾಶಯ ಮಾಡಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಡಿಪಿಆರ್ ತಯಾರಿಸಲು 20 ಕೋಟಿ ಮಂಜೂರು ಮಾಡಲಾಗಿದೆ. ತುಂಗಭದ್ರಾ ನೀರು ನದಿ ಮೂಲಕ ಹರಿದು ಹೋಗುವುದನ್ನು ತಡೆದು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು' ಎಂದರು.
ಇದಕ್ಕೂ ಮುನ್ನ ಎಸ್.ಕೆ. ಮೋದಿ ಪ್ರತಿಮೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಸೋಮಲಿಂಗಪ್ಪ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಶೀಲ್ ನಮೋಶಿ, ಈ.ತುಕಾರಾಂ, ಬುಡಾ ಅಧ್ಯಕ್ಷ ಪಾಲನ್ನ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ತಿಪ್ಪಣ್ಣ ಹಾಗೂ ಜನಪ್ರತಿನಿಧಿಗಳು ಹಾಗೂ ವಿವಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.