ಬಳ್ಳಾರಿ: ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮುಖೇನ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕಿಂದು ತೆರೆ ಬಿದ್ದಿತು.
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಮುಂದಿನ ಬಾರಿ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹಂಪಿಯ ಚರಿತ್ರೆಯನ್ನು ಸಾವಿರಾರು ವರ್ಷಗಳ ಕಾಲ ಉಳಿಸಿಕೊಂಡು ಹೋಗ್ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಪಿಯ ಸಂರಕ್ಷಣೆಗೆ ಮಹತ್ತರ ಜವಾಬ್ದಾರಿ ವಹಿಸಬೇಕಿದೆ ಎಂದರು. ಈ ಬಾರಿಯ ಹಂಪಿ ಉತ್ಸವದಲ್ಲಿ ಸ್ವಲ್ಪವೂ ಏರುಪೇರು ಆಗಿಲ್ಲ. ಪಾರದರ್ಶಕವಾಗಿ ನಡೆಯಲಿಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯೂ ಕೂಡ ಶ್ರಮಿಸಿದೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದ್ರು.
ಶಾಸಕ ಆನಂದ್ ಸಿಂಗ್ ಅವರು ಮಾತನಾಡಿ, ಹಂಪಿ ಉತ್ಸವ ಮನೆ, ಮನದ ಉತ್ಸವ ಆಗಬೇಕು. ಈ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಎತ್ತಿ ಹಿಡಿಯಬೇಕಾದ ಕಾಲಬಂದಿದೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ರಾಜ್ಯ ಸರ್ಕಾರ ಸಾಥ್ ನೀಡಬೇಕು. ಹಂಪಿಗೆ ಬರೀ ಶ್ರೀಮಂತರು ಮಾತ್ರ ಬರುವ ಅವಕಾಶ ಇದೆ. ಬಡ - ಮಧ್ಯಮ ವರ್ಗದವರು ಆಗಮಿಸಿ ಇಲ್ಲಿಯೇ ತಂಗಲು ವಸತಿ ಗೃಹ ನಿರ್ಮಿಸಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ, ಶಾಸಕ ಆನಂದಸಿಂಗ್ ಭಾಗಿಯಾಗಿದ್ದರು.