ಬಳ್ಳಾರಿ : ಬಾಲ್ಯವಿವಾಹ ತಡೆಯಲು ಸಂಪೂರ್ಣವಾಗಿ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್ ಅವರು ಸೂಚಿಸಿದರು.
ಹೊಸಪೇಟೆಯ ಸಹಾಯಕ ಆಯುಕ್ತರ ಸಭಾಂಗಣದಲ್ಲಿ ನಿನ್ನೆ ನಡೆದ ಮಕ್ಕಳ ಸಹಾಯವಾಣಿ ತಾಲೂಕು ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಕ್ಕಳ ಹಕ್ಕುಗಳು ಹಾಗು ಕಾಯಿದೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆದೇಶಿಸಿದರು.
ಬಾಲ್ಯವಿವಾಹ ಪ್ರಕರಣಗಳ ಕುರಿತು ಎಫ್ ಐ ಆರ್ ದಾಖಲಿಸಬೇಕು ಜೊತೆಗೆ ಪ್ರತಿಯೊಂದು ಇಲಾಖೆ ಹಾಗೂ ಮಕ್ಕಳ ಪಾಲನಾ ಕೇಂದ್ರಗಳಲ್ಲಿ 1098 ಮಕ್ಕಳ ಸಹಾಯವಾಣಿ ಸಂಖ್ಯೆ ಮತ್ತು ಲೋಗೋದೊಂದಿಗೆ ಗೋಡೆಬರಹ ಬರೆಸುವಂತೆ ಸೂಚಿಸಿದರು.
ಚೈಲ್ಡ್ ಲೈನ್ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸೂಕ್ತ ಸಲಹೆ, ಮಾರ್ಗದರ್ಶನ ಅಗತ್ಯವಿದ್ದು, ಚೈಲ್ಡ್ ಲೈನ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ವಿಶ್ವನಾಥ, ತಾ.ಪಂ. ಇಒ ಶ್ರೀಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ, ನಗರಸಭೆ ಆಯುಕ್ತೆ ಜಯಲಕ್ಷ್ಮೀ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪುಷ್ಪಲತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಚೆನ್ನಬಸಪ್ಪ, ಹೊಸಪೇಟೆ ಚೈಲ್ಡ್ ಲೈನ್ ನಿರ್ದೇಶಕ ಆನಂದ, ತಾಲೂಕು ಸಂಯೋಜಕ ಚಿದಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆ ಶಿವರಾಮಪ್ಪ ಸೇರಿದಂತೆ ಪೊಲೀಸ್,ಆರೋಗ್ಯ, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಪಾಲನಾ ಕೇಂದ್ರಗಳ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.