ಬಳ್ಳಾರಿ : ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ದೇಹದ ಮೇಲೂ ಇಲ್ಲಿಯ ವಿಮ್ಸ್ ವೈದ್ಯರು ಮತ್ತು ಸಿಬ್ಬಂದಿ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ನಿನ್ನೆ ನಡೆದ ಈ ಒಂದು ಘಟನೆಯೇ ಸಾಕ್ಷಿ.
ಕೊಟ್ಟೂರು ತಾಲೂಕಿನ ಕ್ತಿಯೊಬ್ಬರು ನಿನ್ನೆ ಸೋಂಕಿಗೆ ಬಲಿಯಾಗಿದ್ದರು. ಅವರ ಮೃತ ದೇಹವನ್ನ ಕೊಟ್ಟೂರಿಗೆ ಸಾಗಿಸಬೇಕಿತ್ತು. ಈ ವೇಳೆ ಉದ್ದೇಶಪೂರ್ವಕವಾಗಿ ಕಾಸು ಪೀಕಲೆಂದೇ ಇಲ್ಲಿನ ವೈದ್ಯರು ಸರ್ಕಾರಿ ಆ್ಯಂಬುಲೆನ್ಸ್ ಇದ್ದರೂ ಅದರ ಬದಲಾಗಿ ಖಾಸಗಿ ಆ್ಯಂಬುಲೆನ್ಸ್ ವಾಹನನ್ನು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಅಂದಾಜು ₹30 ಸಾವಿರ ಪಾವತಿ ಮಾಡಿದರೆ ಸಾಕು, ನಮ್ಮವರು ಮೃತದೇಹವನ್ನ ಕೊಟ್ಟೂರಿಗೆ ಸಾಗಿಸ್ತಾರೆ ಎಂದು ವಿಮ್ಸ್ನ ವೈದ್ಯರೇ, ಖಾಸಗಿ ಆ್ಯಂಬುಲೆನ್ಸ್ ಮಾಲೀಕರ ಸಂಪರ್ಕ ಕಲ್ಪಿಸುವಂತೆ ಮಾಡುತ್ತಾರೆ.
ಅದರಂತೆ ಖಾಸಗಿ ಆ್ಯಂಬುಲೆನ್ಸ್ ವಾಹನಗಳ ಮಾಲೀಕರೊಬ್ಬರು ಇವರ ಸಂಪರ್ಕ ಮಾಡಿ 30 ಸಾವಿರ ರೂ. ನೀಡಿದರೆ ತಾವು ಮೃತದೇಹವನ್ನ ಸಾಗಿಸುವುದಾಗಿ ತಿಳಿಸಿದ್ದಾರೆ. ಕಾಕತಾಳೀಯ ಎಂಬಂತೆ ವಿಮ್ಸ್ನ ಶವಾಗಾರದ ಸಿಬ್ಬಂದಿ ಮತ್ತು ವೈದ್ಯರು ಹೇಳಿದಂತೆಯೇ ₹30 ಸಾವಿರ ಬೇಡಿಕೆ ಇಡಲಾಗುತ್ತೆ. ಆದರೆ, ಮೃತಪಟ್ಟ ವ್ಯಕ್ತಿಯ ಸಂಬಂಧಿಕರ ಕೋರಿಕೆಯ ಮೇರೆಗೆ 15 ಸಾವಿರ ರೂ.ಗೆ ಇಳಿಸಿದ್ದಾರೆ.
ವ್ಯವಸ್ಥಿತವಾಗಿ ಹಣ ಪೀಕುತ್ತಿರುವುದರ ಬಗ್ಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ವಿಡಿಯೋ ಮಾಡಿ ಇಲ್ಲಿ ನಡೆಯುತ್ತಿರುವ ಅಕ್ರಮ ಬಿಚ್ಚಿಟ್ಟಿದ್ದಾರೆ. ಸೋಂಕಿಗೆ ಬಲಿಯಾದ ಮೃತದೇಹದ ಮೇಲೂ ಇಲ್ಲನ ವೈದ್ಯರು ವ್ಯಾಪಾರ ಮಾಡುತ್ತಿದ್ದಾರೆ. ಖಾಸಗಿ ಆ್ಯಂಬುಲೆನ್ಸ್ ವಾಹನಗಳ ಜೊತೆಗೂಡಿ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ವಿಮ್ಸ್ ಆಸ್ಪತ್ರೆ ಶವಾಗಾರದ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು. ಖಾಸಗಿ ಆ್ಯಂಬುಲೆನ್ಸ್ ವಾಹನಕ್ಕೂ ಕೂಡ ಅಗತ್ಯ ಶುಲ್ಕ ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ.