ಬಳ್ಳಾರಿ: ಕೊರಚ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದಡಿ ಜಿಲ್ಲೆಯ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಹರಪನಹಳ್ಳಿ ತಾಲೂಕಿನ ಅಗ್ರಹಾರ ಗ್ರಾಮದ ಕೊರಚ ಸಮುದಾಯದ ಮುಖಂಡರು ಹಿರೇಹಡಗಲಿ ಪೊಲೀಸ್ ಠಾಣೆಗೆ ತೆರಳಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ.
ಘಟನೆಯ ವಿವರ:
ಜಿಲ್ಲೆಯ ಕುರುವತ್ತಿ ಗ್ರಾಮದ ಬಳಿಯ ಗುತ್ತೆಮ್ಮನ ಅರಣ್ಯ ಪ್ರದೇಶದಲ್ಲಿ ಕುರಿಗಳ ಅಡ್ಡೆಗೆ ನುಗ್ಗಿದ ಕುರಿಗಳ್ಳರನ್ನ ಹಿಡಿದು ಕುರಿಗಾಹಿಗಳು ಹಿಗ್ಗಾ ಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸದೇ ತಮ್ಮ ಬಳಿಯೇ ಆ ಕಳ್ಳರನ್ನ ಬಂಧಿಸಿಟ್ಟಿದ್ದರು. ಅವರನ್ನ ಪೊಲೀಸರಿಗೆ ಒಪ್ಪಿಸುವಂತೆ ಕೋರಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಕಾಗಿನೆಲೆ ಗುರುಪೀಠದ ಸ್ವಾಮೀಜಿ ರಾಜಿ ಪಂಚಾಯಿತಿ ಮಾಡಲು ಹೋಗಿದ್ದರು. ಆದ್ರೆ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು, ತಮ್ಮ ಮಾತಿನ ಭರಾಟೆಯಲ್ಲಿ ಕೊರಚ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಶಾಸಕ ಪಿಟಿಪಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.
ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ಜಾತಿಜಾತಿಗಳ ವಿಷಬೀಜವನ್ನ ಬಿತ್ತುತ್ತಿದ್ದಾರೆ. ಈ ಕುರಿಗಳ್ಳರಲ್ಲಿ ಕೊರಚ ಸಮುದಾಯವರೂ ಯಾರೂ ಇಲ್ಲ. ಆದಾಗ್ಯೂ ಕೂಡ ಸಮುದಾಯದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಕೂಡಲೇ ಅವರನ್ನ ಬಂಧಿಸಬೇಕು. ಹಾಗೂ ಅವರ ಶಾಸಕತ್ವ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ದಾವಣಗೆರೆ ಜಿಲ್ಲೆಯ ಕೊರಚ ಸಮುದಾಯದ ಮುಖಂಡ ಓಂಕಾರಪ್ಪ ಆಗ್ರಹಿಸಿದ್ದಾರೆ.
ನಮ್ಮ ಜಾತಿಯವ್ರೂ ಯಾರೂ ಇಲ್ಲ:
ಕುರಿಗಳ್ಳರಲ್ಲಿ ನಮ್ಮ ಜಾತಿಯವ್ರು ಯಾರು ಇಲ್ಲ. ಆದ್ರೂ ಕೂಡ ಶಾಸಕ ಪಿಟಿಪಿ ಅವರು ಕೊರಚ ಸಮುದಾಯವನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರೋದು ಕಾನೂನು ರೀತ್ಯಾ ಅಪರಾಧ. ಮೂವರು ಲಂಬಾಣಿ ಸಮುದಾಯದವ್ರು ಹಾಗೂ ಓರ್ವ ವಾಲ್ಮೀಕಿ ಸಮುದಾಯದವ್ರು ಕುರಿಗಳ್ಳರಿದ್ದಾರೆ. ಅವರೆಲ್ಲರೂ ಕೂಡ ಅರೆಸ್ಟ್ ಆಗಿದ್ದಾರೆ. ಇಂತಹ ದುವರ್ತನೆ ತೋರಿದ ಶಾಸಕ ಪಿಟಿಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹರಪನಹಳ್ಳಿ ತಾಲೂಕಿನ ಕೊರಚ ಸಮುದಾಯದ ಮುಖಂಡ ಕೆ.ಅಶೋಕ ಒತ್ತಾಯಿಸಿದ್ದಾರೆ.