ಬಳ್ಳಾರಿ : ಕಳೆದ 10 ತಿಂಗಳಲ್ಲಿ ಬಿಡಿ ನಿವೇಶನಗಳ ಮಾರಾಟ, ಖಾಸಗಿ ವಿನ್ಯಾಸಗಳಿಗೆ ಅನುಮೋದನೆ, ಸಿಎ ಸೈಟ್ಗಳ ಮಂಜೂರಿನಿಂದ 30 ಕೋಟಿ ರೂ. ಆದಾಯ ಬಂದಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, 1988ರಲ್ಲಿ ಬುಡಾ ಅಸ್ತಿತ್ವಕ್ಕೆ ಬಂದಿದೆ. ಈವರೆಗಿನ ಅಧ್ಯಕ್ಷರಾರೂ ಇಷ್ಟೊಂದು ಮೊತ್ತದ ಆದಾಯವನ್ನು ಬುಡಾಗೆ ಕಡಿಮೆ ಅವಧಿಯಲ್ಲಿ ತಂದಿರಲಿಲ್ಲ. ಮಹಾ ಯೋಜನೆ 2021ಕ್ಕೆ ಮುಕ್ತಾಯವಾಗಿದೆ.
ಹೊಸ ಯೋಜನೆಯಲ್ಲಿ ಬಳ್ಳಾರಿ ತಾಲೂಕಿನ ಇನ್ನೂ 12 ಹಳ್ಳಿಗಳನ್ನು ಸೇರಿಸಲೆಂದು ನಗರದ 7 ಕಡೆ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಿದೆ. ಒಟ್ಟಾರೆ 32 ಕಡೆ ಇಂತಹ ಬಸ್ ಶೆಲ್ಟರ್ ಖಾಸಗಿ ಕಂಪನಿಗಳ ಸಿ ಎನ್ ಆರ್ ಫಂಡ್ನಿಂದ ನಿರ್ಮಿಸಲಿದೆ.
ನಗರದ ಜೋಳದರಾಶಿ ರಂಗಮಂದಿರದಲ್ಲಿ ದೊಡ್ಡನಗೌಡರ, ಮುನಿಸಿಪಲ್ ಮೈದಾನದಲ್ಲಿ ಬಹದ್ದೂರು ಶೇಷಗಿರಿರಾವ್, ಕನ್ನಡ ಭವನದಲ್ಲಿ ಫೈಲ್ವಾನ್ ರಂಜಾನ್ ಸಾಬ್, ಉದ್ಯಾನವನದಲ್ಲಿ ಹರಗಿನಡೋಣಿ ಸಣ್ಣ ಬಸನಗೌಡ, ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸಾವಿತ್ರಿ ಬಾಯಿಪುಲೆ, ವಿವೇಕಾನಂದ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಐತಿಹಾಸಿಕ ಬಳ್ಳಾರಿ ಬೆಟ್ಟಕ್ಕೆ ಕೋಬಿಲ್ ಕಾರ್, ಸಂಗನಕಲ್ಲು ಬೆಟ್ಟ, ಮಿಂಚೇರಿ ಬೆಟ್ಟದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ನಗರದ 21 ಪಾರ್ಕ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಅವುಗಳಿಗೆ ಮಹನೀಯರ ಹೆಸರಿಡಲು ನಗರ ಪಾಲಿಕೆಗೆ ಶಿಫಾರಸು ಮಾಡಿದೆ. ಬುಡಾ ಆವರಣದಲ್ಲಿನ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಿದ್ದೇವೆ ಎಂದರು.