ಬಳ್ಳಾರಿ: ಕರ್ನಾಟಕ-ಆಂಧ್ರ ಪ್ರದೇಶ ರಾಜ್ಯದ ಗಡಿ ಧ್ವಂಸ- ಗಡಿ ಗುರುತು ನಾಶಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗ ಅತ್ಯಂತ ತರಾತುರಿಯಲ್ಲಿ ಗಡಿ ಗುರುತು ಕಾರ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಬ್ರಿಟಿಷರ ಕಾಲದ 1886-87ನೇ ಸಾಲಿನ ನಕ್ಷೆ ಮೂಲವೆಂದು ಗಣಿ ಅಕ್ರಮದ ಹೋರಾಟಗಾರರ ವಾದವಾದ್ರೆ, 1896ರ ನಕ್ಷೆಯೇ ಮೂಲ ನಕ್ಷೆಯಾಗಿದೆ ಎಂದು ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ವಾದವಾಗಿದೆ. ಗಡಿ ಸರ್ವೇಗೆ ನಕ್ಷೆಯ ವಿವಾದವೇ ಜೋರಾಗಿದೆ. ಹೀಗಾಗಿ ತರಾತುರಿಯಲ್ಲಿ ಗಡಿ ಸರ್ವೇ ಕಾರ್ಯವನ್ನು ಮುಕ್ತಾಯಗೊಳಿಸಿ ಗಡಿ ಗುರುತಿಸುವ ನಿರ್ಧಾರಕ್ಕೆ ಸರ್ವೇ ಆಫ್ ಇಂಡಿಯಾ ಬಂದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್, 1896ರ ನಕ್ಷೆಯೇ ಅವೈಜ್ಞಾನಿಕ ಆಗಿದೆ ಎಂಬ ಮಾಹಿತಿಯನ್ನು ಕಲಬುರಗಿ ವಿಭಾಗೀಯ ಅಧಿಕಾರಿ ಕೆ.ಎಸ್.ಗಟ್ಟಿಯವರೇ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಕೂಡ 1896ರ ನಕ್ಷೆಯ ಪ್ರಕಾರವೇ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಸರ್ವೇ ನಡೆಸುತ್ತಿರೋದು ನೋಡಿದ್ರೆ ಬಹಳ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಈ ಗಡಿ ಸರ್ವೇ ಕಾರ್ಯವು ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ಈ ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗದ ವರ್ತನೆ ಕುರಿತು ಕೇಂದ್ರ ಸರ್ಕಾರದ ವಿಜ್ಯುಲೆನ್ಸ್ ಕಮಿಟಿಗೆ ಪತ್ರ ಬರೆಯೋದಾಗಿ ಟಪಾಲ್ ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ಓದಿ: ಕರ್ನಾಟಕ-ಆಂಧ್ರ ಗಡಿಧ್ವಂಸ ಪ್ರಕರಣ: ಸರ್ವೇ ಆಫ್ ಇಂಡಿಯಾ ಡೈರೆಕ್ಟರ್ಗಳ ಭೇಟಿ, ಪರಿಶೀಲನೆ
ಈ ಬಗ್ಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಮಾತನಾಡಿ, ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಂದ ಗಡಿ ಭಾಗದಲ್ಲಿ ಸರ್ವೇ ಕಾರ್ಯ ನಡೆದಿದೆ. 76 ಕಡೆಗಳಲ್ಲಿ ರಾಕ್ ಪಾಯಿಂಟ್ಸ್ ಗುರುತಿಸೋ ಕಾರ್ಯ ನಡೆದಿದೆ. ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗ ಗುರುತಿಸಿದ ಬಳಿಕ ಆ ರಾಕ್ ಪಾಯಿಂಟ್ಸ್ ಸರ್ಟಿಫೈಯ್ಡ್ ಮಾಡೋ ಕಾರ್ಯ ನಮ್ಮಿಂದ ನಡೆಯಲಿದೆ. ಆ ಬಳಿಕ ಗಡಿ ಗುರುತು ಕಾರ್ಯ ನಡೆಯಲಿದೆ.
ಮೂಲ ನಕ್ಷೆ ಅಥವಾ ಮೂಲವಲ್ಲದ ನಕ್ಷೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾದ ನಕ್ಷೆಯ ಪ್ರಕಾರವೇ ಈ ಗಡಿ ಗುರುತು ನಿರ್ಧರಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.