ಬಳ್ಳಾರಿ: ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ "ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ" ಎಂಬ ಕಾರ್ಯಕ್ರಮ ನಡೆಯಿತು.
ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸರ್ಕಾರದ ವರ್ಷದ ಪ್ರಗತಿ ವಿವರ ಒಳಗೊಂಡ ವಿಶೇಷ ಪುಸ್ತಕ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ 'ಜನಪದ' ಹಾಗೂ 'ಮಾರ್ಚ್ ಆಫ್ ಕರ್ನಾಟಕ' ಮಾಸಿಕಗಳನ್ನು ಬಿಡುಗಡೆಗೊಳಿಸಿದರು. ಈ ವೇಳೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋವಿಡ್‌ನಿಂದ ಗುಣಮುಖರಾದ ಹಾಲಪ್ಪ ಕುಡಿತಿನಿ ಮಾತನಾಡಿ, ಸಮಯದ ಅಭಾವದಿಂದ ಮುಖ್ಯಮಂತ್ರಿಗಳ ಜತೆ ಮಾತನಾಡಲಾಗಲಿಲ್ಲ. ಆದ್ರೆ, ಅವರು ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದ್ದು ಖುಷಿಯಾಯ್ತು. ನನಗೆ ಕೋವಿಡ್್ ಬಂದ ಸಂದರ್ಭದಲ್ಲಿ ತುಂಬ ಆತಂಕಕ್ಕೆ ಒಳಗಾಗಿದ್ದೆ. ಮುಂದೇನು? ಎಂದು ಚಿಂತೆ ಮಾಡಿದ್ದೆ. ಇಡೀ ಕುಟುಂಬವೇ ಕಣ್ಣೀರು ಹಾಕಿತ್ತು. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಧೈರ್ಯ ತುಂಬಿದರು. ವೈದ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ ಆತ್ಮಸ್ಥೈರ್ಯ ತುಂಬಿ ಗುಣಮುಖರಾಗುವಂತೆ ಮಾಡಿದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿ.ಪಂ ಸಿಇಇ ಕೆ.ನಿತೀಶ್, ಎಸ್ಪಿ ಸಿ.ಕೆ.ಬಾಬಾ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.ಕೋವಿಡ್‌ನಿಂದ ಗುಣಮುಖರಾದ ಖಾಜಾ ಅಸೀಫ್, ಎಸ್.ಬಿ.ಲಕ್ಷ್ಮೀದೇವಿ, ರಫಿ, ರೇಷ್ಮಾ, ಸಂತೋಷ ನಾಯಕ, ಹಾಲಪ್ಪ ಕುಡಿತಿನಿ, ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆದ ಅಸಂಘಟಿತ ಕಾರ್ಮಿಕರಾದ ಕೊಲ್ಲಣ್ಣ, ಚಾಂದಪಾಶಾ,ಮೌನೇಶ್, ಕಿಶನ್,ವಿಜಯಕುಮಾರ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಕೂಡ ಹಾಜರಿದ್ದರು.