ಬಳ್ಳಾರಿ: ಸಿರುಗುಪ್ಪ ತಾಲೂಕಿನ ರಾರಾವಿ(ವೇದಾವತಿ) ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ನೆರೆಯ ಆಂಧ್ರ ಪ್ರದೇಶದ ಆದೋನಿ ನಗರದ ದೇವೇಂದ್ರ ಎಂಬಾತ ಪ್ರಾಣಾಪಾಯದಿಂದ ಪಾರಾಗಿರುವ ವ್ಯಕ್ತಿ. ಪತ್ನಿ ಹನುಮಂತಮ್ಮಳೊಂದಿಗೆ ಭಾನುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸಿರುಗುಪ್ಪ ನಗರದಲ್ಲಿ ನೆಲೆಸಿರುವ ತನ್ನ ಮಗಳ ಆರೋಗ್ಯ ವಿಚಾರಿಸಿ ಆದೋನಿಗೆ ಬೈಕ್ನಲ್ಲಿ ವಾಪಸಾಗುತ್ತಿದ್ದಾಗ, ರಾರಾವಿ ನದಿಯ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಬೈಕ್ ಸ್ಕಿಡ್ ಆಗಿ ದೇವೇಂದ್ರ ನದಿಯಲ್ಲಿ ಬಿದ್ದಿದ್ದ.
ನೀರಿನ ರಭಸಕ್ಕೆ ಕೊಚ್ಚಿ ಹೊಗುತ್ತಿದ್ದ ದೇವೇಂದ್ರ ಜಾಲಿ ಗಿಡವೊಂದನ್ನು ಹಿಡಿದು ರಕ್ಷಣೆಗಾಗಿ ಜೋರಾಗಿ ಕೂಗಿದ್ದಾನೆ. ಈ ವೇಳೆ ಧಾವಿಸಿ ಬಂದ ಸ್ಥಳೀಯರು, ಆತನನ್ನು ರಕ್ಷಣೆ ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ದೇವೇಂದ್ರ ಪತ್ನಿ ರಸ್ತೆಯಲ್ಲೇ ಬಿದ್ದಿದ್ದರಿಂದ ಅಪಾಯ ತಪ್ಪಿದಂತಾಗಿದೆ.