ಬಳ್ಳಾರಿ: ಕೆಲಸಕ್ಕೆ ಹೋದ ಗುಗ್ಗರಟ್ಟಿಯ 24ರ ಹರೆಯದ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಯುವತಿ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ.
ಫಾಸ್ಟರ್ ನನ್ನನ್ನು ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಫಾಸ್ಟರ್ನನ್ನು ಕರೆದುಕೊಂಡು ಬಂದಿದ್ದೇನೆ. ನಾನು ಚರ್ಚ್ಗೆ ಹೋಗುವುದು ನನ್ನ ತಂದೆ-ತಾಯಿಗೆ ಇಷ್ಟವಿರಲಿಲ್ಲ. ಹೀಗಾಗಿ ಚರ್ಚ್ಗೆ ಹೋಗದಂತೆ ಮಾಡಲು ಫಾಸ್ಟರ್ಗೂ ನನಗೂ ಸಂಬಂಧ ಕಲ್ಪಿಸಿದ್ರು. ಅಲ್ಲದೆ ಫಾಸ್ಟರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ರು. ಪೋಷಕರೇ ಸಂಬಂಧ ಕಲ್ಪಿಸಿದ ಕಾರಣ ನಾನೇ ಫಾಸ್ಟರ್ನನ್ನು ಮದುವೆಯಾಗುವಂತೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ. ನಾವು ಮದುವೆಯಾಗಿದ್ದೇವೆ. ನನ್ನ ಹಾಗೂ ನನ್ನ ಗಂಡನಿಗೆ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಅಧಿಕಾರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.
ಓದಿ : ಬಂಟ್ವಾಳ: ಔಷಧಿ ಎಂದು ಕಳೆನಾಶಕ ಸೇವಿಸಿ ಗ್ರಾಪಂ ಚುನಾವಣಾ ಅಭ್ಯರ್ಥಿ ಸಾವು
ಡಿಸೆಂಬರ್ 16ರಂದು ಗುಗ್ಗರಟ್ಟಿಯ ಯುವತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ಕುರಿತು ಯುವತಿಯ ತಂದೆ ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಲಿವಿಂಗ್ ವಾಟರ್ ಚರ್ಚ್ನ ಫಾಸ್ಟರ್ ರವಿಕುಮಾರ್ ಎಂಬಾತ ನಮ್ಮ ಮಗಳನ್ನು ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದರು. ಇದೀಗ ಯುವತಿ ವಿಡಿಯೋ ಹರಿಬಿಟ್ಟು ತನ್ನ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.