ಬಳ್ಳಾರಿ: ನಗರದ ತೇರುಬೀದಿಯಲ್ಲಿ ಲಾಕ್‌ಡೌನ್ ಹಾಗೂ ಕೊರೊನಾ ಸೋಂಕನ್ನು ಲೆಕ್ಕಿಸದೆ ಸಾಗರೋಪಾದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇಂತಹದ್ದೊಂದು ವಿಡಿಯೋ ವೈರಲ್ ಆಗಿದೆ. ಇದು ಈಗಿನದ್ದೋ ಅಥವಾ ಚುನಾವಣೆ ಸಮಯದ ವಿಡಿಯೋ ಎನ್ನುವುದು ಖಚಿತ ಪಟ್ಟಿಲ್ಲ. ಆದರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಗಣಿನಾಡು ಬಳ್ಳಾರಿಯಲ್ಲಿ ಪ್ರತಿನಿತ್ಯ ಸಾವಿರ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಒಂದು ಕಡೆ ಜಿಲ್ಲಾಡಳಿತ ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ್ದರೆ, ಜನರು ಮಾತ್ರ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿರುವುದು ದುರಂತವಾಗಿದೆ.
ಬೆಳಗ್ಗೆ 6 ರಿಂದ 10 ಗಂಟೆವರೆಗೆ ನಗರದ ಬ್ರೂಸ್ ಪೇಟೆಯಿಂದ ಜೈನ್ ಮಾರುಕಟ್ಟೆವರೆಗೆ ಟ್ರಾಫಿಕ್ ಜಾಮ್ ಇತ್ತು. ನೂರಾರು ಜನರು ಒಂದೇ ಕಡೆ ಗುಂಪು ಗುಂಪಾಗಿ ಸೇರಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು. ಈ ದೃಶ್ಯಗಳು ಫೇಸ್ಬುಕ್, ವಾಟ್ಸಆ್ಯಪ್ಗಳಲ್ಲಿ ಹರಿದಾಡುತ್ತಿವೆ.