ಬಳ್ಳಾರಿ : ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪರವಾನಗಿ ಪಡೆಯದೆ ಆಂಧ್ರ ಪ್ರದೇಶದ ಕೃಷ್ಣಪಟ್ಟಣಂ ಬಂದರಿಗೆ ಜಿಲ್ಲೆಯಿಂದ ಅದಿರಿನ ಪೌಡರ್ (ಫೈನ್ಸ್) ಸಾಗಿಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅದೊಂದು ವದಂತಿ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದ ಹೊರವಯದ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಮೈನಿಂಗ್ ಕಂಪನಿ ಅಕ್ರಮವಾಗಿ ಫೈನ್ಸ್ ಸಾಗಣೆ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಆ ಕಂಪನಿಯ ದಾಖಲೆಗಳನ್ನು ಪರಿಶೀಲಿಸಿದಾಗ, ಕೇವಲ ತಮಿಳುನಾಡಿನ ಸಿಮೆಂಟ್ ಕಂಪನಿಗೆ ಅದಿರಿನ ಪೌಡರ್ ಸಾಗಿಸಿರೋದು ಕಂಡು ಬಂದಿದೆ.
ಕಂಪನಿಯ ಇನ್ವಾಯ್ಸ್ ಬಿಲ್ನಲ್ಲಿ ಅದೇ ರೀತಿಯಾಗಿಯೇ ಇದೆ. ಹಾಗಾಗಿ, ಕೃಷ್ಣಪಟ್ಟಣಂ ಬಂದರಿಗೆ ಫೈನ್ಸ್ ಸಾಗಣೆ ಆಗಿರುವುದು ಕೇವಲ ಊಹಾ ಪೋಹವಷ್ಟೇ ಎಂದು ಎಸ್ಪಿ ಸೈದುಲು ಅಡಾವತ್ ಹೇಳಿದ್ದಾರೆ. ತಮಿಳುನಾಡಿಗೆ ಫೈನ್ಸ್ ಸಾಗಣೆಗೆ ಕಂಪನಿ ಅನುಮತಿ ಪಡೆದಿದೆ.
ಓದಿ: ಪರವಾನಗಿ ಇಲ್ಲದೇ ಫೈನ್ಸ್ ಸಾಗಾಟ: ಬಳ್ಳಾರಿಯಲ್ಲಿ 19 ಲಾರಿ ಸೀಜ್
ಅದಿರಿನ ಪೌಡರ್ ಸಾಗಣೆ ಮಾಡಿರುವುದರ ಹಿಂದೆ ಯಾವುದೇ ಗಣಿ ಮಾಫಿಯಾದ ಪ್ರಭಾವ ಇರುವುದು ಕಂಡು ಬಂದಿಲ್ಲ. ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಮೈನಿಂಗ್ ಕಂಪನಿಯು ಅಂದಾಜು 5,000 ಮೆಟ್ರಿಕ್ ಟನ್ನಷ್ಟು ಫೈನ್ಸ್ ಸಾಗಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪರವಾನಗಿ ಪಡೆದಿದೆ.
ಅದರೊಳಗೆ ಎಷ್ಟು ಟ್ರಿಪ್ ಸೀಟ್ಗಳಿವೆ ಎಂಬುದನ್ನು ಗಣಿ ಇಲಾಖೆಯವರು ಪರಿಶೀಲನೆ ಮಾಡಬೇಕಿದೆ. ನಾವು 54 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಈಗಾಗಲೇ 32 ಮಂದಿಯನ್ನು ಬಂಧಿಸಲಾಗಿದೆ. ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ, ವ್ಯವಸ್ಥಾಪಕ, ಲಾರಿ ಚಾಲಕರು, ಟ್ರಾನ್ಸ್ ಪೋರ್ಟ್ ಕಂಪನಿಯ ಮುಖ್ಯಸ್ಥರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಅದಿರಿನ ಕಲ್ಲು ಸಾಗಣೆಯಲ್ಲ: ಕೆಲ ಮಾಧ್ಯಮಗಳಲ್ಲಿ ಅಕ್ರಮ ಅದಿರು ಸಾಗಣೆಯಂತ ಸುದ್ದಿ ಬಿತ್ತರವಾಗಿರುವುದು ತಪ್ಪು. ಇದು ಅದಿರಿನ ಕಲ್ಲು ಅಲ್ಲ, ಅದಿರಿನ ಪೌಡರ್ ಅಷ್ಟೇ. ಕೇವಲ 10 ಎಂ.ಎಂ ಹಾಗೂ ಶೇ. 43 ರಷ್ಟು ಕಬ್ಬಿಣಾಂಶ ಇದರಲ್ಲಿ ಇರುತ್ತದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ರಾಯಧನ ಸಂದಾಯ ಆಗಿರುತ್ತದೆ. ಆದರೆ, ಅದಿರಿನ ಪೌಡರ್ ಸಾಗಣೆಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿ ಪಡೆಯಬೇಕಷ್ಟೇ. ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಮೈನಿಂಗ್ ಕಂಪನಿಯು ಪರವಾನಗಿ ಪಡೆಯದೆ ಅದಿರಿನ ಪೌಡರ್ ಸಾಗಣೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ ಎಸ್ಪಿ ಮಾಹಿತಿ ನೀಡಿದ್ದಾರೆ.